

ಚೆನ್ನೈ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಲವಾರು ಮಕ್ಕಳ ಸಾವಿಗೆ ಕಾರಣವಾಗಿರುವ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಕಾ ಕಂಪನಿ, ಮನೆ ಮತ್ತು ತಮಿಳುನಾಡು ಔಷಧ ಆಡಳಿತದ ಉನ್ನತ ಅಧಿಕಾರಿಗಳ ಸ್ಥಳಗಳು ಸೇರಿದಂತೆ ಚೆನ್ನೈನ ಅನೇಕ ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಮ್ಮಿನ ಸಿರಪ್ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಹಿನ್ನೆಲೆ ಕಾಂಚೀಪುರಂನಲ್ಲಿ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ ಮಾಲೀಕ ಜಿ.ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು. ಇದೀಗ ಜಾರಿ ನಿರ್ದೇಶನಾಲಯ (ಇಡಿ) ಇಂದು (ಅ.13) ತಮಿಳುನಾಡಿನಾದ್ಯಂತ 7 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ರಂಗನಾಥನ್ ಅವರ ಮನೆ ಮತ್ತು ಕಂಪನಿ ಹಾಗೂ ಹಿರಿಯ ಔಷಧ ನಿಯಂತ್ರಣ ಅಧಿಕಾರಿಗಳಾದ ಕಾರ್ತಿಕೇಯನ್ ಮತ್ತು ದೀಪಾ ಜೋಸೆಫ್ ಅವರ ಮನೆಗಳ ಮೇಲೆ ಈ ದಾಳಿ ನಡೆಸಲಾಗಿದೆ. 20 ಕ್ಕೂ ಹೆಚ್ಚು ಅಧಿಕಾರಿಗಳನ್ನು ಒಳಗೊಂಡ ಇಡಿ ತಂಡಗಳು ಬೆಳಂಬೆಳಗ್ಗೆ ಈ ದಾಳಿ ನಡೆಸಿದ್ದಾರೆ. ತಮಿಳುನಾಡಿನ ಔಷಧ ನಿಯಂತ್ರಣ ಇಲಾಖೆಯಿಂದ ಈಗಾಗಲೇ ಸೀಲ್ ಮಾಡಲಾಗಿರುವ ಕಾರ್ಖಾನೆ ಈಗ ಜಂಟಿ ವಿಧಿವಿಜ್ಞಾನ ಮತ್ತು ನಿಯಂತ್ರಕ ತನಿಖೆಗೆ ಒಳಪಟ್ಟಿದೆ. ನಿಷೇಧಿತ ಕೈಗಾರಿಕಾ ದರ್ಜೆಯ ರಾಸಾಯನಿಕಗಳನ್ನು ಹೇಗೆ ಬಳಕೆ ಮಾಡಲಾಯ್ತು ಎಂಬುದರ ಬಗ್ಗೆ ತನಿಖಾಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.
(ಏಜೆನ್ಸೀಸ್)
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಜ್ವರ, ಶೀತ, ಕೆಮ್ಮು ತುಂಬ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳ ಮೇಲಂತೂ ಬಹುಬೇಗ ಪರಿಣಾಮ ಬೀರುತ್ತದೆ. ಆದರೆ, ಕಾಯಿಲೆ ನಿವಾರಿಸಬೇಕಾದ ಔಷಧಗಳೇ ಮಕ್ಕಳ ಪಾಲಿಗೆ ಮಾರಕವಾದರೆ ಗತಿ ಏನು? ಇದು ತುಂಬ ಗಂಭೀರ ಹಾಗೂ ಶೋಚನೀಯ ಸಂಗತಿ. ಈ ಕುರಿತು ಸೂಕ್ತ ತನಿಖೆ ನಡೆಸುವುದಲ್ಲದೆ, ಕಳಪೆ ಮತ್ತು ನಕಲಿ ಔಷಧಗಳ ಜಾಲವನ್ನು ನಿಮೂಲನಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೋಷಕರು ಒತ್ತಾಯ ಹೇರಿದ್ದಾರೆ.
ಕಲುಷಿತ ಕೆಮ್ಮಿನ ಸಿರಪ್ಗಳಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ವರದಿಗಳ ಬಳಿಕ, ಭಾರತದ ಉನ್ನತ ಔಷಧ ನಿಯಂತ್ರಕ ಸಂಸ್ಥೆ ಕ್ರಮ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಔಷಧ ನಿಯಂತ್ರಕರಿಗೆ ಕಟ್ಟುನಿಟ್ಟಿನ ಸಲಹೆಯನ್ನು ನೀಡಿದ್ದು, ಔಷಧಿಯನ್ನು ಮಾರಾಟ ಮಾಡುವ ಮುನ್ನ ಸರಿಯಾಗಿ ಪರೀಕ್ಷಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ.