ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ವಿಷಯುಕ್ತ ಸ್ವೀಟ್‌ಬಾಕ್ಸ್ ರವಾನೆ

Sweetbox
Published on

ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರು ದುರ್ಬಳಕೆ ಮಾಡಿಕೊಂಡು ಹೊಸ ವರ್ಷಕ್ಕೆ ವಿಷ ಪದಾರ್ಥ ಬೆರೆಸಿರಬಹುದಾದ ಸ್ವೀಟ್‌ಬಾಕ್ಸ್‌ಗಳನ್ನು ಅವರ ಆಪ್ತ ವಲಯದವರಿಗೆ ರವಾನಿಸಿದ್ದು ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸ ವರ್ಷದ ಶುಭ ಕೋರುವ ಪತ್ರದೊಂದಿಗೆ ಎನ್‌ಇಎಸ್(ರಾಷ್ಟ್ರೀಯ ಶಿಕ್ಷಣ ಸಮಿತಿ) ಕಾರ್ಯದರ್ಶಿ ಎಸ್.ಎನ್.ನಾಗರಾಜ್, ವೈದ್ಯರಾದ ಡಾ. ಅರವಿಂದ್ ಹಾಗೂ ಡಾ. ಪವಿತ್ರಾ ಅವರಿಗೆ ಕೊರಿಯರ್ ಮೂಲಕ ಸಿಹಿ ತಿಂಡಿ ತಲುಪಿತ್ತು. ಬಾಕ್ಸ್‌ನಲ್ಲಿದ್ದ ಸ್ವೀಟ್ ಸೇವಿಸಿದ ನಾಗರಾಜ್ ಅವರಿಗೆ ಅತ್ಯಂತ ಕಹಿಯ ಅನುಭವವಾಗಿತ್ತು. ತಕ್ಷಣ ಎಂಎಲ್‌ಸಿ ಡಿ.ಎಸ್.ಅರುಣ್ ಮುಖಾಂತರ ಡಾ. ಧನಂಜಯ ಸರ್ಜಿ ಅವರ ಗಮನಕ್ಕೆ ತಂದಿದ್ದಾರೆ. ಆಗ ನಾನು ಯಾರಿಗೂ ಸ್ವೀಟ್ ಬಾಕ್ಸ್ ಕಳಿಸಿಲ್ಲ ಎಂದು ಡಾ. ಸರ್ಜಿ ಸ್ಪಷ್ಟಪಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಡಾ. ಧನಂಜಯ ಸರ್ಜಿ ಹೆಸರು ದುರ್ಬಳಕೆ ಮಾಡಿಕೊಂಡು ಸಿಹಿ ತಿಂಡಿ ಕಳಿಸಲಾಗಿದೆ. ಅದರಲ್ಲಿ ವಿಷ ಪದಾರ್ಥ ಬೆರೆಸಿರುವ ಅನುಮಾನವಿದೆ ಎಂದು ಆರೋಪಿಸಿ ಡಾ. ಸರ್ಜಿ ಅವರ ಆಪ್ತ ಕಾರ್ಯದರ್ಶಿ ಸಚಿನ್‌ರಾಜ್ ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯುಕ್ತ ಸ್ವೀಟ್ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ವೀಟ್ ಬಾಕ್ಸ್‌ನಲ್ಲಿ ತಮ್ಮ ಹೆಸರು ಹಾಗೂ ಭಾವಚಿತ್ರ ಮುದ್ರಿಸಿರುವ ಪತ್ರ ಇರಿಸಿರುವುದು ಕಂಡುಬಂದಿದೆ. ಯಾರೋ ಉದ್ದೇಶಪೂರ್ವಕವಾಗಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕಿದೆ ಎಂದು ಡಾ. ಧನಂಜಯ ಸರ್ಜಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net