ಮರಣವೇದನೆಯೊಂದಿಗೆ 80 ಸೆಕೆಂಡ್​ಗಳಲ್ಲಿ ನೀಡಿದ ವಿಡಿಯೋ ಹೇಳಿಕೆಯೊಂದು ಕೇಸ್​ಗೆ ಸಾಕ್ಷಿಯಾಗಿ ಬಿಡ್ತು!

murder
Published on

ಸಹರಣಪುರ: ಉತ್ತರ ಪ್ರದೇಶದ ಸಹರಣಪುರದಲ್ಲಿ ವ್ಯಕ್ತಿಯೊಬ್ಬ ಮರಣವೇದನೆಯೊಂದಿಗೆ ನೀಡಿದ ವಿಡಿಯೋ ಹೇಳಿಕೆ ವೈರಲ್ ಆಗಿದ್ದು, ಪೊಲೀಸರು ಆತನ ಕುಟುಂಬದವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

ಕೊನೆಯುಸಿರೆಳೆಯುವ ಮುನ್ನ ಈ ರೀತಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಪಂಕಜ್​ ಕುಮಾರ್ ಎಂದು ಗುರುತಿಸಲಾಗಿದೆ. ಆ ವಿಡಿಯೋದಲ್ಲಿ ಆತ, ತನ್ನ ಕುಟುಂಬದ ಸದಸ್ಯರು ವಿಷ ಪ್ರಾಶನ ಮಾಡಿದ್ದು, ಇದೀಗ ಸಾವಿನ ಸನಿಹದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಹೆಸರನ್ನು ಆತ ಉಲ್ಲೇಖ ಮಾಡಿದ್ದು, ಅವರೆಲ್ಲರ ಹೆಸರೂ ಈಗ ಎಫ್​ಐಆರ್​ನಲ್ಲಿ ದಾಖಲಾಗಿದೆ. ಎಲ್ಲೋ ಬಯಲು ಪ್ರದೇಶದಲ್ಲಿ ಬಿದ್ದು ಕೊಂಡು ಆತ ಈ ವಿಡಿಯೋ ಚಿತ್ರೀಕರಿಸಿಕೊಂಡಿರುವುದ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪಂಕಜ್ ಅವರ ಅತ್ತೆ, ಇಬ್ಬರು ಪುತ್ರಿಯರು ಮತ್ತು ಸೊಸೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಪಂಕಜ್ ಸಾವು ಹೇಗೆ ಸಂಭವಿಸಿದೆ ಎಂಬುದು ತನಿಖೆಯ ನಂತರವಷ್ಟೇ ಸ್ಪಷ್ಟವಾಗಲಿದೆ. ಮೇಲ್ನೋಟಕ್ಕೆ ಇದು ಕುಟುಂಬ ಕಲಹದಂತೆ ಭಾಸವಾಗುತ್ತಿದೆ. ವಿಡಿಯೋವನ್ನು ಪಂಕಜ್ ತನ್ನ ಫೇಸ್​ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊತ್ವಾಲಿ ದೇಹತ್​ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಶುರುವಾಗಿದೆ. ಸಂಬಂಧ ಪಟ್ಟ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ. ಸಾವಿಗೆ ಕಾರಣ ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಹರಣಪುರ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಭಟ್ನಾಗರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net