ಗುಂಡ್ಲುಪೇಟೆ: ಪ್ರೀತಿಸುವುದಾಗಿ ಅಪ್ರಾಪ್ತೆಯನ್ನು ನಂಬಿಸಿ ದೇವಾಲಯದಲ್ಲಿ ತಾಳಿ ಕಟ್ಟಿದ್ದ ಆರೋಪಿ ವಿರುದ್ಧ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ತಾಲೂಕಿನ ಕುಂದಕೆರೆ ಗ್ರಾಮದ ವೆಂಕಟರಾಜು (25) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚಾಮರಾಜನಗರ ತಾಲೂಕಿನ ಗ್ರಾಮವೊಂದರ 15 ವರ್ಷದ ಬಾಲಕಿಯನ್ನು ಆಗಸ್ಟ್ 17ರಂದು ತಾಲೂಕಿನ ತೆರಕಣಾಂಬಿ ಸಮೀಪದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಬೈಕಿನಲ್ಲಿ ಕರೆತಂದು ಪೂಜಾರಿಗೆ ಆಕೆಗೆ 21 ವರ್ಷ ಎಂದು ಸುಳ್ಳು ಹೇಳಿ ಆರೋಪಿ ತಾಳಿ ಕಟ್ಟಿದ್ದ. ಆದರೆ ತನ್ನ ಹಾಗೂ ಅಪ್ರಾಪ್ತೆಯ ಮನೆಯವರಿಗೆ ವಿಷಯ ತಿಳಿಸದೆ ಮುಚ್ಚಿಟ್ಟಿದ್ದ. ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬಾಲಕಿಯ ಹಿತದೃಷ್ಟಿಯಿಂದ ಆಕೆಯನ್ನು ಬಾಲಮಂದಿರಕ್ಕೆ ಕಳಿಸಲಾಗಿದ್ದು ಆರೋಪಿಯನ್ನು ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.