

ಪೋಕ್ಸೋ ಪ್ರಕರಣಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಫೋಟೋ ಹಾಗೂ ವೈಯಕ್ತಿಕ ವಿವರ ಬಹಿರಂಗಪಡಿಸುವ ಪೊಲೀಸ್ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಕಲಂ 23ರ (6ರಿಂದ 1 ವರ್ಷ ಜೈಲು ವಾಸ) ಅನ್ವಯ ಕಾನೂನು ಅಸ್ತ್ರ ಪ್ರಯೋಗಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ದೌರ್ಜನ್ಯಕ್ಕೆ ಒಳಗಾದ ಮಗುವಿನ ಹೆಸರು, ಪೋಟೋ, ವಿಳಾಸ, ಕೌಟುಂಬಿಕ ಹಿನ್ನೆಲೆ, ಶಾಲೆ ವಿವರ ಹಾಗೂ ನೆರೆಹೊರೆಯವರ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದಾಗ್ಯೂ ತನಿಖಾಧಿಕಾರಿಗಳು ಹಾಗೂ ಜಿಲ್ಲಾ ಎಸ್ಪಿಗಳು ಮಗುವಿನ ವೈಯಕ್ತಿಕ ವಿವರಗಳನ್ನು ಬಿಡುಗಡೆ ಮಾಡುತ್ತಿರುವ ಕ್ರಮಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಅತೃಪ್ತಿ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆಯಲ್ಲಿ ಗೌಪ್ಯತೆ ಕಾಪಾಡದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಆಯೋಗ ಪತ್ರ ಬರೆದಿದೆ. ಪತ್ರದ ಆಧಾರದ ಮೇಲೆ ಕೈಗೊಂಡಿರುವ ಕ್ರಮಗಳ ಕುರಿತು ಜ.30ರ ಒಳಗೆ ದೆಹಲಿ ಕೇಂದ್ರ ಕಚೇರಿಗೆ ವರದಿ ಕಳುಹಿಸುವುದು ಕಡ್ಡಾಯವೆಂದೂ ನಿರ್ದೇಶನ ನೀಡಿದೆ. ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ಎಲ್ಲ ನಿಯಮ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಡಿಜಿಪಿ ನೀಲಮಣಿ ಎನ್.ರಾಜು, ರಾಜ್ಯದ ಎಲ್ಲ ಕಮಿಷನರ್ಗಳು, ಜಿಲ್ಲಾ ಎಸ್ಪಿಗಳು ಹಾಗೂ ಠಾಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದಾರೆ.
ಪೋಕ್ಸೋ ಕಾಯ್ದೆ 2012 ಅನ್ನು ಲೈಂಗಿಕ ಹಲ್ಲೆ , ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂಥ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ ಜಾರಿಗೆ ತರಲಾಗಿದೆ. ಈ ಕಾಯ್ದೆ ಅನ್ವಯ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ವ್ಯಕ್ತಿಯನ್ನು ಮಗು ಎಂದೇ ವ್ಯಾಖ್ಯಾನಿಸಲಾಗುತ್ತದೆ.
ಪೋಕ್ಸೋ ಪ್ರಕರಣಗಳಲ್ಲಿ ಮಗುವಿನ ಮಾಹಿತಿ ಬಹಿರಂಗಪಡಿಸುತ್ತಿವ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದಿದೆ. ಈ ಕುರಿತು ನಿಯಮ ಪಾಲನೆ ಮಾಡುವಂತೆ ಎಲ್ಲ ಠಾಣೆಗಳಿಗೆ ಮೆಮೋ ಕಳುಹಿಸಲಾಗಿದೆ. | ಡಾ.ಎಸ್.ಪರಶಿವಮೂರ್ತಿ ಎಡಿಜಿಪಿ (ಅಪರಾಧ)
ಮಗುವಿನ ವೈಯಕ್ತಿಕ ವಿವರ ಬಹಿರಂಗಗೊಳಿಸುವ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಸಂಸ್ಥೆ ಮತ್ತು ಅದನ್ನು ವರದಿ ಮಾಡಿದ ವರದಿಗಾರರ ವಿರುದ್ಧವೂ ಕಡ್ಡಾಯವಾಗಿ ಕಾನೂನು ಕ್ರಮ ಕೈಗೊಳ್ಳಲು ಆಯೋಗ ಸೂಚಿಸಿದೆ. ಸುದ್ದಿ ಬರವಣಿಗೆ ಹಾಗೂ ಪ್ರಕಟಣೆಯಲ್ಲಿ ವರದಿಗಾರ ಮಾಡಿದ ಲೋಪಗಳಿಗೆ ಮಾಧ್ಯಮ ಸಂಸ್ಥೆಯ ಮಾಲೀಕ ಅಥವಾ ಪ್ರಕಾಶಕರೂ ಹೊಣೆಗಾರರಾಗಿರುತ್ತಾರೆ. ಹೀಗಾಗಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದೆ.
| ಕೀರ್ತಿನಾರಾಯಣ ಸಿ. ಬೆಂಗಳೂರು