

ಶಿವಮೊಗ್ಗ: ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವುದು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದ್ದು ಪ್ರಸ್ತುತ ಮಕ್ಕಳಿಗೆ ಪೋಕ್ಸೋ ಕುರಿತು ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ, ವಕೀಲ ಬಸವರಾಜ್ ಹೇಳಿದರು.
ನಗರದ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಮಕ್ಕಳಿಗೆ ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಪಾಲಕರು ಅಥವಾ ಸಹೋದರರ ಹೊರತಾಗಿ ಇತರರೊಡಗೆ ವ್ಯವಹರಿಸುವಾಗ ಕಾಯ್ದೆಗಳ ಪರಿಜ್ಞಾನ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಕಾಯ್ದೆ ಬಿಗಿಯಾಗಿದೆ. ಆದರೂ ಕೆಲವೆಡೆ ಹಿಂದುಳಿದ ವರ್ಗಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿರುವುದು ಅತ್ಯಂತ ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನಾಡಿದ ಟ್ರಸ್ಟ್‌ನ ಉಪಾಧ್ಯಕ್ಷ ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ಮಕ್ಕಳ ಲೈಂಗಿಕ ಶೋಷಣೆಯನ್ನು ತಡೆಗಟ್ಟಲು ಅವರಿಗೆ ಈ ಕಾಯ್ದೆ ಬಗ್ಗೆ ಅರಿವು ಬೇಕು. ಆ ನಿಟ್ಟಿನಲ್ಲಿ ಶಾಲೆಯಲ್ಲಿ ದೂರುಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗುವುದು ಎಂದರು.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಅರುಣ್ ದೀಕ್ಷಿತ್ ಸಮಾರಂಭ ಉದ್ಘಾಟಿಸಿದರು. ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ರೋ. ಶಶಿಕಾಂತ್ ನಾಡಿಗ್, ಟ್ರಸ್ಟ್‌ನ ಖಜಾಂಚಿ ರೋ. ಜಿ.ವಿಜಯ್ ಕುಮಾರ್ ಹಾಗೂ ಪ್ರಾಚಾರ್ಯ ಆರ್.ಸೂರ್ಯನಾರಾಯಣನ್ ಉಪಸ್ಥಿತರಿದ್ದರು.
ಹರಿಗೆ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಜಾಗೃತಿ
ಶಿವಮೊಗ್ಗ: ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರಿನ ರಾಜ್ಯ ಬಾಲಭವನ ಮತ್ತು ಶಿವಮೊಗ್ಗ ಜಿಲ್ಲಾ ಬಾಲಭವನ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪೋಕ್ಸೋ ಮತ್ತು ಕೋಟ್ಪಾ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಮಕ್ಷಳ ರಕ್ಷಣಾಧಿಕಾರಿ ಗಾಯತ್ರಿ ಅವರು ಮಕ್ಕಳಿಗೆ ಎರಡೂ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಭರತ್ ಹಾಗೂ ಶಿವಮೊಗ್ಗ ಜಿಲ್ಲಾ ಬಾಲಭವನ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಆರ್.ಮಂಜುಳಾ ಮಾತನಾಡಿದರು. ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎಂ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಕೆ.ಸುಜಾತ, ಪ್ರಕಾಶ್ ಎಸ್.ಓಲೇಕಾರ, ರೋಹಿಣಿ ಉಪಸ್ಥಿತರಿದ್ದರು.