ವಂಚಕ ವಜ್ರೋದ್ಯಮಿ ಚೋಕ್ಸಿ ಕರೆತರಲು ಬೆಲ್ಜಿಯಂಗೆ ಐಷಾರಾಮಿ ಸೌಲಭ್ಯ ಭರವಸೆ ನೀಡಿದ ಭಾರತ! Mehul Choksi

Mehul Choksi
Published on

Mehul Choksi : ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರದ ಉದ್ಯಮಿ ಮೆಹುಲ್​ ಚೋಕ್ಸಿಯನ್ನು ಬೆಲ್ಜಿಯಂ ಅಧಿಕಾರಿಗಳು ಕೆಲ ತಿಂಗಳುಗಳ ಹಿಂದೆ ಬಂಧಿಸಿದ್ದಾರೆ. ಇದೀಗ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದಿರುವ ಭಾರತ ಸರ್ಕಾರದ ಗೃಹ ಸಚಿವಾಲಯ, ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತನನ್ನು ಯಾವ ಪರಿಸ್ಥಿತಿಗಳಲ್ಲಿ ಜೈಲಿನಲ್ಲಿ ಇರಿಸಲಾಗುವುದು ಎಂಬುದರ ಬಗ್ಗೆ ಬೆಲ್ಜಿಯಂ ನ್ಯಾಯಾಂಗ ಅಧಿಕಾರಿಗಳಿಗೆ ಭರವಸೆ ನೀಡಿದೆ.

ಮುಂಬೈ ನ್ಯಾಯಾಲಯಗಳು ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದ್ದು, ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ಚೋಕ್ಸಿಯನ್ನು ಬೆಲ್ಜಿಯಂ ಅಧಿಕಾರಿಗಳು ಕಳೆದ ಏಪ್ರಿಲ್​ನಲ್ಲಿ ಬಂಧಿಸಿದ್ದಾರೆ. ಇದೀಗ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಇದರ ಭಾಗವಾಗಿ ಭಾರತದ ಗೃಹ ಸಚಿವಾಲಯ ಬೆಲ್ಜಿಯಂ ನ್ಯಾಯಾಂಗ ಅಧಿಕಾರಿಗಳಿಗೆ ಪತ್ರ ಬರೆದು, ಹಸ್ತಾಂತರವಾದರೆ, ಚೋಕ್ಸಿಯನ್ನು ಸುಸ್ಥಿತಿಯಲ್ಲಿಡುವುದಾಗಿ ಭರವಸೆ ನೀಡಿದೆ.

ಮಹಾರಾಷ್ಟ್ರ ಸರ್ಕಾರ ಮತ್ತು ಜೈಲು ಅಧಿಕಾರಿಗಳು ಸೇರಿ ವಿವರವಾದ ಭರವಸೆ ಪತ್ರವನ್ನು ರಚಿಸಿದೆ. ಹಸ್ತಾಂತರ ಪ್ರಕ್ರಿಯೆಯಲ್ಲಿ ಮಾನವ ಹಕ್ಕುಗಳ ಕಾಳಜಿಗಳನ್ನು ಪರಿಹರಿಸುವ ಸುರಕ್ಷತಾ ಕ್ರಮಗಳನ್ನು ಈ ಪತ್ರದಲ್ಲಿ ವಿವರಿಸಲಾಗಿದೆ ಎಂದು ANI ವರದಿ ಮಾಡಿದೆ. ಸಿಬಿಐ ಪ್ರಕರಣದಡಿಯಲ್ಲಿ ಹಸ್ತಾಂತರಕ್ಕೆ ಭಾರತ ಮನವಿ ಮಾಡಿದೆ. ಅಂದಹಾಗೆ, ಚೋಕ್ಸಿ ವಿರುದ್ಧ ಐಪಿಸಿ ಸೆಕ್ಷನ್ 120-ಬಿ, 409, 420, 477ಎ, 201, ಮತ್ತು 1988 ರ ಪಿಒಸಿಎಯ ಸಂಬಂಧಿತ ಸೆಕ್ಷನ್‌ಗಳು ಸೇರಿದಂತೆ ಭಾರತೀಯ ಕಾನೂನಿನ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.

ಜೈಲಿನಲ್ಲಿ ವಿವಿಧ ಸೌಲಭ್ಯಗಳು, ವೈದ್ಯಕೀಯ ಸೌಕರ್ಯಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳ ವಿವರಣೆಯನ್ನು ನೀಡುವ ಮೂಲಕ ಬಂಧನದ ಮಾನದಂಡಗಳ ಕುರಿತು ಬೆಲ್ಜಿಯಂ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಪತ್ರದ ಮೂಲಕ ಭರವಸೆ ನೀಡಿದೆ.

ಪತ್ರದಲ್ಲಿ ಉಲ್ಲೇಖಿಸಿರುವಂತೆ ಚೋಕ್ಸಿಯನ್ನು ಮುಂಬೈನ ಆರ್ಥರ್ ರೋಡ್ ಜೈಲಿನ ಬ್ಯಾರಕ್ ಸಂಖ್ಯೆ 12 ರಲ್ಲಿ ಇರಿಸಲಾಗುವುದು. ಈ ಬ್ಯಾರಕ್‌ನಲ್ಲಿ ಗರಿಷ್ಠ ಆರು ಜನರಿಗೆ ಸ್ಥಳಾವಕಾಶವಿದೆ ಮತ್ತು ಪ್ರತಿ ಕೈದಿಗೆ ಕನಿಷ್ಠ ಮೂರು ಚದರ ಮೀಟರ್ ವೈಯಕ್ತಿಕ ಸ್ಥಳವನ್ನು ಒದಗಿಸಲಾಗುವುದು. ಈ ಸೆಲ್​ನಲ್ಲಿ ಬೆಳಕಿನ ವ್ಯವಸ್ಥೆ, ವೆಂಟಿಲೇಷನ್​ ಮತ್ತು ವೈಯಕ್ತಿಕ ವಸ್ತುಗಳಿಗೆ ಸಂಗ್ರಹಣೆ ಸೌಲಭ್ಯವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಇನ್ನು ಮಾನವೀಯ ಭರವಸೆಯ ಅಡಿಯಲ್ಲಿ ಚೋಕ್ಸಿಯನ್ನು ಏಕಾಂತ ಸೆರೆವಾಸದಲ್ಲಿ ಇರಿಸಲಾಗುವುದಿಲ್ಲ. ಅವರಿಗೆ ಶುದ್ಧ ಕುಡಿಯುವ ನೀರು, 24/7 ವೈದ್ಯಕೀಯ ಸೌಲಭ್ಯ ಮತ್ತು ದೈನಂದಿನ ವ್ಯಾಯಾಮ ಹಾಗೂ ವಿರಾಮದ ಸಮಯವನ್ನು ಒದಗಿಸಲಾಗುವುದು. ವಿಶೇಷ ಆಹಾರದ ಅಗತ್ಯಗಳನ್ನು ವೈದ್ಯಕೀಯ ಅನುಮೋದನೆಯೊಂದಿಗೆ ಪೂರೈಸಲಾಗುವುದು. ಇದಿಷ್ಟೇ ಅಲ್ಲದೆ, ಯೋಗ, ಧ್ಯಾನ ಮತ್ತು ಗ್ರಂಥಾಲಯ ವ್ಯವಸ್ಥೆ ಸಹ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಆರೋಗ್ಯ ರಕ್ಷಣೆಯಡಿಯಲ್ಲಿ ಆರು ವೈದ್ಯಕೀಯ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುವುದು. 20 ಹಾಸಿಗೆಗಳ ಜೈಲು ಆಸ್ಪತ್ರೆಯು ಐಸಿಯು ಸೇವೆಗಳನ್ನು ಒದಗಿಸಲಾಗುವುದು ಮತ್ತು ತುರ್ತು ಸಮಯದಲ್ಲಿ ಹತ್ತಿರದ ಸರ್ ಜೆ.ಜೆ. ಗ್ರೂಪ್ ಆಫ್ ಹಾಸ್ಪಿಟಲ್ಸ್‌ಗೆ ದಾಖಲಿಸಲಾಗುವುದು. ಅಲ್ಲದೆ, ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಪರಿಗಣಿಸಿ, ವೈಯಕ್ತಿಕ ವೆಚ್ಚದಲ್ಲಿ ಖಾಸಗಿ ವೈದ್ಯಕೀಯ ಆರೈಕೆಯನ್ನು ಸಹ ಅನುಮತಿಸಲಾಗಿದೆ ಎಂದು ಪತ್ರದಲ್ಲಿ ಭರವಸೆ ನೀಡಲಾಗಿದೆ.

ಅಂದಹಾಗೆ, ಬ್ಯಾರಕ್​ ನಂಬರ್​ 12 ಸಂಪೂರ್ಣ ಅಹಿಂಸಾತ್ಮಕ ಅಪರಾಧಿಗಳಿಗೆ ಮಾತ್ರ ಮೀಸಲಾಗಿದೆ. ಮುಖ್ಯ ಕಾರಾಗೃಹದಿಂದ ಪ್ರತ್ಯೇಕವಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿದೆ. ಕುಟುಂಬ ಭೇಟಿಗಳು ಮತ್ತು ಸಂವಹನ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ ಎಂದು ಪತ್ರದಲ್ಲಿ ಭರವಸೆ ನೀಡಲಾಗಿದೆ.

ಈ ವಿವರವಾದ ಭರವಸೆಗಳು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ಅನುಸರಿಸುತ್ತದೆ. ವಿಶೇಷವಾಗಿ ಯುರೋಪಿಯನ್ ಮಾನವ ಹಕ್ಕುಗಳ ಸಮಾವೇಶದ ಆರ್ಟಿಕಲ್ 3 ರ ಅಡಿಯಲ್ಲಿ ದೌರ್ಜನ್ಯ ತಡೆಗಟ್ಟುವಿಕೆಗೆ ಇದು ಸಂಬಂಧಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬೆಲ್ಜಿಯಂ ನ್ಯಾಯಾಂಗ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಭರವಸೆಯನ್ನು ನೀಡಿದೆ.

ಮುಂದೇನಾಗಲಿದೆ ಅಂದರೆ, ಬೆಲ್ಜಿಯಂ ನ್ಯಾಯಾಂಗ ಅಧಿಕಾರಿಗಳು ಈ ಭರವಸೆ ಪತ್ರವನ್ನು ಕಾನೂನು ಅವಶ್ಯಕತೆಗಳ ಜೊತೆಗೆ ಮೌಲ್ಯಮಾಪನ ಮಾಡಲಿದ್ದಾರೆ. ಭರವಸೆಗಳು ಅನುಮೋದನೆ ಪಡೆದ ಬಳಿಕ ಚೋಕ್ಸಿಯನ್ನು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ. ಭಾರತಕ್ಕೆ ಆಗಮಿಸಿದರೆ, ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಯಂತರ ಹಣ ವಂಚಿಸಿದ ಪ್ರಕರಣದ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.

ಪ್ರಕರಣದ ಹಿನ್ನೆಲೆ ಏನು?

ಮೆಹುಲ್ ಚೋಕ್ಸಿ, ತನ್ನ ಸಹೋದರ ನೀರವ್ ಮೋದಿ ಜತೆಗೂಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಿದ್ದು, ಇದರಲ್ಲಿ ಚೋಕ್ಸಿಯ ಪಾಲು 7 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೆಹುಲ್ ಚೋಕ್ಸಿ ವಿರುದ್ದ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿವೆ. ಈತನ ಬಂಧನಕ್ಕೆ ನೆರವಾಗಬೇಕೆಂದು ಸಿಬಿಐ ಹಾಗೂ ಇ.ಡಿ. ಮಾಡಿದ್ದ ಮನವಿ ಪುರಸ್ಕರಿಸಿರುವ ಇಂಟರ್​ಪೋಲ್, ಆರೋಪಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net