

Haryana man : ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ವಿರೋಧಿಸಿದ್ದಕ್ಕೆ ಹರಿಯಾಣ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಪಿಲ್ (26) ಎಂದು ಗುರುತಿಸಲಾಗಿದೆ. ಈತ ಹರಿಯಾಣದ ಜಿಂದ್ ಜಿಲ್ಲೆಯ ನಿವಾಸಿ. ಈತ ಡಾಂಕಿ ಮಾರ್ಗವಾಗಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದ. ಈ ಡಾಂಕಿ ಮಾರ್ಗ ಅಂದರೆ, ವಲಸಿಗರು, ವಿಶೇಷವಾಗಿ ಭಾರತದಿಂದ ಯುಕೆ, ಯುಎಸ್ ಅಥವಾ ಕೆನಡಾದಂತಹ ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ದೇಶಗಳಿಗೆ ತೆಗೆದುಕೊಳ್ಳುವ ಅಕ್ರಮ ಮತ್ತು ಅಪಾಯಕಾರಿ ಪ್ರಯಾಣವಾಗಿದೆ. ಇದರ ಕತೆಯನ್ನೇ ಆಧರಿಸಿದ ಡಂಕಿ ಸಿನಿಮಾದಲ್ಲಿ ನಟ ಶಾರುಖ್ ಖಾನ್ ನಟಿಸಿದ್ದರು.
ಮೃತ ಕಪಿಲ್, ಅಮೆರಿಕದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಹರಿಯಾಣದ ಬರಾಹ್ ಕಲಾನ್ ಗ್ರಾಮದ ಈಶ್ವರ್ ಅವರ ಪುತ್ರ. ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಪಕ್ಕದ ಆವರಣದ ಹೊರಗೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಈ ವೇಳೆ ಆತನನ್ನು ವಿರೋಧಿಸಿದ್ದರು. ಇದರಿಂದ ಆಕ್ರೋಶಗೊಂಡ ಆ ವ್ಯಕ್ತಿ ಸ್ಥಳದಲ್ಲೇ ಗುಂಡು ಹಾರಿಸಿ, ಕೊಲೆ ಮಾಡಿದ್ದಾನೆ ಎಂದು ಬರಾಹ್ ಕಲಾನ್ ಗ್ರಾಮದ ಪಂಚಾಯತ್ ಸದಸ್ಯ ಸುರೇಶ್ ಕುಮಾರ್ ಗೌತಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಪಿಲ್ ಅವರ ಕುಟುಂಬ ಕೃಷಿ ಕುಟುಂಬ. ಆತ ಕುಟುಂಬದ ಏಕೈಕ ಪುತ್ರ. ಎರಡೂವರೆ ವರ್ಷಗಳ ಹಿಂದೆ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. 2022 ರಲ್ಲಿ "ಡಾಂಕಿ ಮಾರ್ಗ"ದ ಮೂಲಕ ಅಮೆರಿಕವನ್ನು ಪ್ರವೇಶಿಸಿದರು. ಪನಾಮದ ಕಾಡುಗಳನ್ನು ದಾಟಿ, ಮೆಕ್ಸಿಕೋ ಗಡಿ ಗೋಡೆಯನ್ನು ಹತ್ತಿದರು ಎಂದು ಹೇಳಲಾಗಿದೆ.
ಈ ಒಂದು ಪ್ರಯಾಣಕ್ಕಾಗಿ ಕಪಿಲ್ ಅವರ ಕುಟುಂಬ ಸುಮಾರು 45 ಲಕ್ಷ ರೂ. ಖರ್ಚು ಮಾಡಿದೆ ಎಂಬ ಮಾಹಿತಿ ಇದೆ. ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆ ವೇಳೆ ಕಪಿಲ್ ಅವರನ್ನು ಬಂಧಿಸಲಾಗಿತ್ತು. ಆದರೆ, ಆನಂತರದಲ್ಲಿ ಕಾನೂನು ಕ್ರಮಗಳ ಮೂಲಕ ಬಿಡುಗಡೆ ಮಾಡಲಾಯಿತು ಮತ್ತು ಅಮೆರಿಕದಲ್ಲೇ ಕಪಿಲ್ ನೆಲೆಸಿದ್ದ.
ಅಮೆರಿಕದಲ್ಲಿ ವಾಸವಿರುವ ಕಪಿಲ್ ಸಂಬಂಧಿಕರೊಬ್ಬರು ಸಾವಿನ ಸುದ್ದಿಯನ್ನು ಕುಟುಂಬಕ್ಕೆ ತಿಳಿಸಿದ್ದಾರೆ. ಕಪಿಲ್ಗೆ ಇಬ್ಬರು ಸಹೋದರಿಯರಿದ್ದು, ಅವರಲ್ಲಿ ಒಬ್ಬಳು ವಿವಾಹಿತಳು. ಕಪಿಲ್ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮ ದುಃಖಿತರಾಗಿದೆ. ಕಪಿಲ್ ಅವರ ಮೃತದೇಹವನ್ನು ಭಾರತಕ್ಕೆ ತರುವಂತೆ ಒತ್ತಾಯಿಸಲು ಕುಟುಂಬವು ಉಪ ಆಯುಕ್ತರನ್ನು ಭೇಟಿ ಮಾಡಲು ಮುಂದಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲಕ್ಕಾಗಿ ನಾವು ಆಶಿಸುತ್ತೇವೆ ಎಂದು ಬರಾಹ್ ಕಲಾನ್ ಗ್ರಾಮದ ಪಂಚಾಯತ್ ಸದಸ್ಯ ಸುರೇಶ್ ಕುಮಾರ್ ಗೌತಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್)