

ಬೆಂಗಳೂರು: ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಉಂಟಾಗಿರುವ ಬೆಳೆ ಹಾನಿ ಮತ್ತು ಇತರೆ ನಷ್ಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿ ಸಮಗ್ರ ಮಾಹಿತಿ ಪಡೆದುಕೊಂಡರು. ಮುಂಜಾನೆ ನರೇಂದ್ರಮೋದಿಯವರು ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ರಕ್ಷಣಾ ಕಾರ್ಯ ಮತ್ತು ಪರಿಹಾರ ಕ್ರಮಗಳ ಬಗ್ಗೆ ಸಿಎಂ ವಿವರಣೆ ನೀಡಿದರು.
ಅತಿವೃಷ್ಟಿಯಿಂದ ವಿಶೇಷವಾಗಿ ಜೀವಹಾನಿ ಮತ್ತು ಬೆಳೆ ಹಾನಿ ಉಂಟಾಗಿರುವುದರ ಬಗ್ಗೆ ಪ್ರಧಾನ ಮಂತ್ರಿಗಳು ಕಳಕಳಿ ವ್ಯಕ್ತಪಡಿಸಿದರು. ರಾಜ್ಯಕ್ಕೆ ಅಗತ್ಯ ನೆರವು ಮತ್ತು ಸಹಕಾರ ನೀಡುವ ಭರವಸೆಯನ್ನು ನೀಡಿದರು. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೂಡ ದೂರವಾಣಿ ಕರೆ ಮಾಡಿದ್ದರು. ರಾಜ್ಯದಲ್ಲಿನ ಪ್ರವಾಹ ಮತ್ತು ಅತಿವೃಷ್ಟಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು. ಬೆಂಗಳೂರಿನ ಜವಹರಲಾಲ್ ನೆಹರೂ ಸಂಶೋಧನಾ ಸಂಸ್ಥೆಗೆ ಮಳೆಯಿಮದ ಆಗಿರುವ ಹಾನಿಯ ಬಗ್ಗೆ ಪ್ರಧಾನಿ ತೀವ್ರ ಆತಂಕ ವ್ಯಕ್ತಪಡಿಸಿದರು. ಕೂಡಲೇ ಪರಿಶೀಲನೆ ನಡೆಸಿ ಅಲ್ಲಿನ ದಾಖಲೆಗಳಿಗೆ ಹೆಚ್ಚಿನ ಹಾನಿಯಾಗದಂತೆ ತಡೆಗಟ್ಟಬೇಕೆಂದು ಸೂಚನೆ ನೀಡಿದರರೆನ್ನಲಾಗಿದೆ. ತಕ್ಷಣ ಸಿಎಂ ಬೊಮ್ಮಾಯಿ ಸಂಶೋಧನಾ ಸಂಸ್ಥೆಗೆ ತೆರಳಿ ಭಾರತರತ್ನ ಸಿಎನ್ಆರ್ ರಾವ್ ಜತೆ ಚರ್ಚೆ ನಡೆಸಿದರು.
ಮಳೆ ಕುಂಠಿತ: ಸೈಕ್ಲೋನ್ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಕುಂಠಿತವಾಗಲಿದೆ. ಸದ್ಯ ತೇವಾಂಶ ಭರಿತ ಮೋಡಗಳು ಇರುವ ಕಾರಣದಿಂದ ಕೆಲ ಭಾಗಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ನಾಲ್ಕೈದು ದಿನಗಳ ಹಿಂದೆ ಸೈಕ್ಲೋನ್ ರೂಪುಗೊಳ್ಳುವ ಸಾಧ್ಯತೆಯಿತ್ತು. ಆದರೆ, ಬದಲಾದ ಹವಾಮಾನ ಹಾಗೂ ಶ್ರೀಲಂಕಾ ಸಮೀಪದಲ್ಲಿ ವಾಯುಭಾರ ಕುಸಿತವಾಗಲಿರುವ ಹಿನ್ನೆಲೆಯಲ್ಲಿ ಸದ್ಯ ಸೈಕ್ಲೋನ್ ರೂಪುಗೊಳ್ಳುವ ಯಾವುದೇ ಲಕ್ಷಣಗಳಿಲ್ಲ.