VIDEO| ಕರಕುಶಲ ಮೇಳಕ್ಕೆ ಸರ್ಪ್ರೈಸ್​ ಭೇಟಿ ನೀಡಿ ಆಹಾರ ಸವಿದು ಬಿಲ್​ ಪಾವತಿಸಿ ಸಮಸ್ಯೆ ಆಲಿಸಿದ ಪ್ರಧಾನಿ ಮೋದಿ!

PM Modi
Published on

ನವದೆಹಲಿ: ರಾಷ್ಟ್ರ ರಾಜಧಾನಿ ಇಂಡಿಯಾ ಗೇಟ್​ ಬಳಿಯಿರುವ ರಾಜಪಥ ಮಾರ್ಗದಲ್ಲಿಂದು ನಡೆದ ಕರಕುಶಲ ಮೇಳ(ಹುನಾರ್​ ಹಾತ್​)ಕ್ಕೆ ಸರ್ಪ್ರೈಸ್​ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಖಾದ್ಯ ಲಿಟ್ಟಿ-ಛೊಖಾ ಹಾಗೂ ಕುಲ್ಹಾದ್​ ಟೀ ಟನ್ನು ಸವಿದರು.

ಕೇಂದ್ರ ಸಂಪುಟ ಸಭೆ ಮುಗಿದ ಬಳಿಕ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ "ಹುನಾರ್​ ಹಾತ್​"ಗೆ ತೆರಳಿದ ಪ್ರಧಾನಿ ಮೋದಿ ಸುಮಾರು 50 ನಿಮಿಷಗಳ ಸಮಯ ಕಳೆದು ಕರಕುಶಲಗಾರರೊಂದಿಗೆ ಸಂವಹನ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಮುಖ್ತಾರ್​ ಅಬ್ಬಾಸ್​ ನಖ್ವಿ ಕೂಡ ಉಪಸ್ಥಿತರಿದ್ದರು.

ಪ್ರಧಾನಿ ಭೇಟಿ ಸ್ವತಃ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಸರ್ಪ್ರೈಸ್​ ನೀಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೇಟಿ ವೇಳೆ ಲಿಟ್ಟಿ ಛೋಖಾ ಸವಿದ ಪ್ರಧಾನಿ ಮೋದಿ, 120 ರೂ. ಪಾವತಿಸಿದರು. ಅಲ್ಲದೆ, ಸಚಿವ ಅಬ್ಬಾಸ್​ ನಖ್ವಿಯೊಂದಿಗೆ ಚಹಾ ಸವಿದು 40 ರೂ. ನೀಡಿದರು..

ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಪ್ರಧಾನಿ ಮೋದಿ, ಬಿಸಿಯಾದ ಟೀನೊಂದಿಗೆ ರುಚಿಯಾದ ಲಿಟ್ಟಿ ಛೋಖಾ ಸವಿದೆ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಸಾಂಪ್ರದಾಯಿಕ ಸಂಗೀತ ಪರಿಕರಗಳಲ್ಲಿ ಮ್ಯೂಸಿಕ್​ ಬಾರಿಸುವ ಪ್ರಯತ್ನ ಮಾಡಿದ ಪ್ರಧಾನಿ ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ, ಕೆಲವು ಮ್ಯೂಸಿಕ್​ಗಳನ್ನು ನನ್ನ ಕೈನಿಂದಲೇ ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಪ್ರಧಾನಿಯೊಂದಿಗೆ ಮಾತನಾಡಿದ ಕಲಾವಿದರು ಸಾಂಪ್ರದಾಯಿಕ ಕಲೆಗಳು ನಶಿಸುತ್ತಿವೆ. ಅವುಗಳ ಉಳಿಯುವಿಕೆಗಾಗಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net