

ನವದೆಹಲಿ: ನಮ್ಮ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಅವುಗಳನ್ನೆಲ್ಲ ಎದುರಿಸಿಕೊಂಡು ಮುಂದಿನ ಐದು ವರ್ಷದ ಅವಧಿಯಲ್ಲಿ ಸಮಗ್ರ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಇಂಡಿಯನ್ ಚೇಂಬರ್ ಆಫ್ ಕಾಮರ್ಸ್(ಐಸಿಸಿ)ನ 95ನೇ ವಾರ್ಷಿಕೋತ್ಸವ ದಿನ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಕರೊನಾ ವೈರಸ್ ವಿರುದ್ಧ ಭಾರತವೂ ಜಗತ್ತಿನ ಇತರೆ ರಾಷ್ಟ್ರಗಳಂತೆ ಹೋರಾಟ ನಡೆಸುತ್ತಿದೆ. ಆದರೆ, ಇದರ ಜತೆಗೆ ಬೇರೆ ವಿಪತ್ತುಗಳನ್ನು ನಾವು ಎದುರಿಸುತ್ತಿದ್ದೇವೆ. ಪ್ರವಾಹ ಪರಿಸ್ಥಿತಿ, ಮಿಡತೆ ದಾಳಿ, ತೈಲ ಬಾವಿಯಲ್ಲಿ ಬೆಂಕಿ, ಸಣ್ಣ ಸಣ್ಣ ಭೂಕಂಪಗಳು, ಎರಡು ಚಂಡ ಮಾರುತ ಹೀಗೆ ಎಲ್ಲವನ್ನೂ ನಾವು ಒಟ್ಟಾಗಿ ಎದುರಿಸುತ್ತಿದ್ದೇವೆ. ಈ ಸಂಕಷ್ಟವನ್ನು ಪ್ರತಿಯೊಬ್ಬ ಭಾರತೀಯನೂ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾನೆ. ಇದನ್ನು ನಮ್ಮ ದೇಶದ ಮಟ್ಟಿಗೆ ಮಹತ್ವದ ಪರಿವರ್ತನೆಯ ತಿರುವು ಅಥವಾ ಟರ್ನಿಂಗ್ ಪಾಯಿಂಟ್ ಆಗುವಂತೆ ಮಾಡಿಕೊಳ್ಳಬೇಕು. ಆ ಮೂಲಕ ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಕೈಜೋಡಿಸಬೇಕು.
ದಶಕಗಳ ಹಿಂದೆ ಸ್ವಾಮಿ ವಿವೇಕಾನಂದರು ಬರೆದಿಟ್ಟ ಸಂದೇಶವಿದು - ಅವರದೇ ಉತ್ಪನ್ನಗಳನ್ನು ಬಳಸುವುದಕ್ಕೆ ಭಾರತೀಯರನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಭಾರತದ ಕಲಾಕೃತಿಗಳಿಗೆ ಇತರೆ ದೇಶಗಳಲ್ಲಿ ಮಾರುಕಟ್ಟೆ ಸಿಗುವಂತೆ ಮಾಡಬೇಕು. ಇದು ನಮಗೆ ಈಗ ದಾರಿದೀಪವಾಗಿದೆ. ಕೋವಿಡ್ ನಂತರದ ಜಗತ್ತಿನಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವುದಕ್ಕೆ ಇದು ನೆರವಾಗಲಿದೆ.
ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಕಮಾಂಡ್ ಮತ್ತು ಕಂಟ್ರೋಲ್ನಿಂದ ಹೊರತರಬೇಕಾಗಿದೆ. ಅದನ್ನು ಪ್ಲಗ್ ಆ್ಯಂಡ್ ಪ್ಲೇ ಸ್ವರೂಪಕ್ಕೆ ತೆಗೆದುಕೊಂಡು ಹೋಗಬೇಕು. ಅಂತಹ ಪ್ರಯತ್ನಕ್ಕೆ, ಗಟ್ಟಿ ನಿರ್ಧಾರ ಮತ್ತು ಕಠಿಣ ನಿಲುವಿನೊಂದಿಗೆ ಇರುವಂತಹ ಹೂಡಿಕೆಗೆ ಇದು ಸಕಾಲ. ಪ್ರಾದೇಶಿಕ ಸಪ್ಲೈ ಚೇನ್ ಅನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ರೂಪಿಸುವುದಕ್ಕೂ ಇದು ಸಕಾಲ.
ಉತ್ಪಾದನಾ ವಲಯದಲ್ಲಿ ಔನ್ನತ್ಯ ಮೆರೆದಿದ್ದ ಬೆಂಗಾಳದ ಇತಿಹಾಸವನ್ನು ಪುನರುಜ್ಜೀವನಗೊಳಿಸಬೇಕು. ಬಂಗಾಳ ಇಂದು ಏನು ಚಿಂತನೆ ನಡೆಸಿದೆಯೋ ಅದನ್ನು ಭಾರತ ನಾಳೆ ಚಿಂತನೆ ನಡೆಸಬೇಕು. ನಾವು ಇದರಿಂದ ಪ್ರೇರೇಪಣೆ ಪಡೆಯಬೇಕು ಮತ್ತು ಒಟ್ಟಾಗಿ ಮುಂದಕ್ಕೆ ಹೆಜ್ಜೆ ಇರಿಸಬೇಕು.