Gaza peace summit | ಈಜಿಪ್ಟ್‌ನಲ್ಲಿ ನಡೆಯುವ ಶೃಂಗಸಭೆಗೆ ಪ್ರಧಾನಿ ಮೋದಿ ಗೈರು; ಕಾರಣವೇನು..?

modi
Published on

Delhi: ಅಮೆರಿಕ ಮಧ್ಯಸ್ಥಿಕೆಯ ಗಾಜಾ ಶಾಂತಿ ಯೋಜನೆಯ ಚೌಕಟ್ಟನ್ನು ಅಂತಿಮಗೊಳಿಸಲು ಇಂದು ವಿಶ್ವ ನಾಯಕರುಗಳು ಈಜಿಪ್ಟ್‌ನಲ್ಲಿ ಸಭೆ ಸೇರಲಿದ್ದು, ಇದರಿಂದ ಪ್ರಧಾನಿ ನರೇಂದ್ರ ಮೋದಿ(Narendra Modi) ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್, ಎಲ್-ಸಿಸಿ ಸಹ-ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್-ಸಿಸಿ ವೈಯಕ್ತಿಕವಾಗಿ ಅತ್ಯಂತ ಮುತುವರ್ಜಿ ವಹಿಸಿ ಆಹ್ವಾನದ ನೀಡಿದ ಹೊರತಾಗಿಯೂ, ಪ್ರಧಾನಿ ಮೋದಿ, ಶರ್ಮ್ ಎಲ್-ಶೇಖ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸದಿರಲು ಕಾರಣವೇನಿರಬಹುದು ಎಂಬುದು ಸದ್ಯ ಎಲ್ಲರ ಊಹಾಪೋಹಗಳಿಗೆ ಕಾರಣವಾಗಿದೆ. ಈ ಸಭೆಯಲ್ಲಿ 20 ಕ್ಕೂ ಹೆಚ್ಚು ವಿಶ್ವ ನಾಯಕರು ಶಾಂತಿ ಒಪ್ಪಂದದ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಮತ್ತು ಗಾಜಾದ ಯುದ್ಧಾನಂತರದ ಪುನರ್ನಿರ್ಮಾಣ ಕಾರ್ಯದ ಬಗ್ಗೆ ಚರ್ಚಿಸಲು ಸಭೆ ಸೇರಲಿದ್ದಾರೆ.

ಪಾಕಿಸ್ತಾನಿ ಅಂಶ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈ ಶೃಂಗಸಭೆಯಲ್ಲಿ ಭಾಗವಹಿಸಲಿರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ನಿರಾಕರಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಏಪ್ರಿಲ್ 22 ರಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಪಹಲ್ಗಾಮ್ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು, ಅದರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದಕ್ಕೆ ಪ್ರತಿಯಾಗಿ ಭಾರತ ಸೇನೆ ಆಪರೇಷನ್ ಸಿಂಧೂರ ರೂಪದಲ್ಲಿ ತಿರುಗೇಟು ನೀಡಿತು.

ಸಿಂಧೂರ ಕಾರ್ಯಾಚರಣೆಯ ಬಳಿಕ, ಭಾರತ ಸರ್ಕಾರ ರಾಜತಾಂತ್ರಿಕ ಕ್ರಮಗಳ ಮೂಲಕ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿತು ಮತ್ತು ಅಟ್ಟಾರಿ-ವಾಘಾ ಚೆಕ್‌ಪೋಸ್ಟ್ ಅನ್ನು ಮುಚ್ಚಿತು. ಕಳೆದ ತಿಂಗಳು ಚೀನಾದಲ್ಲಿ ನಡೆದ 25 ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ, ಪ್ರಧಾನಿ ಮೋದಿ ಅವರು ಪಾಕಿಸ್ತಾನಿ ಪ್ರಧಾನಿಯ ಸಮ್ಮುಖದಲ್ಲಿ, ಭಯೋತ್ಪಾದನೆಯನ್ನು ಬೆಂಬಲಿಸುವ ಕೆಲವು ರಾಷ್ಟ್ರಗಳ ವಿರುದ್ಧ ಕಿಡಿ ಕಾರಿದರು.

ಭಾರತ ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಗೆ ತುತ್ತಾಗುತ್ತಿದ್ದು, ಪಹಲ್ಗಾಮ್ ದಾಳಿಯ ಬಳಿಕ ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲ ನೀಡುತ್ತಿವೆ, ಪ್ರತಿಯೊಂದು ರೂಪ ಮತ್ತು ಬಣ್ಣದಲ್ಲೂ ರಾಷ್ಟ್ರವಿರೋಧಿ ಕೃತ್ಯಗಳನ್ನು ನಾವೆಲ್ಲಾ ಸರ್ವಾನುಮತದಿಂದ ವಿರೋಧಿಸಬೇಕು. ಇದು ಮಾನವೀಯತೆಯ ಕಡೆಗೆ ನಮ್ಮ ಕರ್ತವ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಶೃಂಗಸಭೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಟ್ರಂಪ್ ಫ್ಯಾಕ್ಟರ್..?

ಪ್ರಧಾನಿ ನಿಗದಿತ ಸಭೆಯಿಮದ ದೂರ ಉಳಿಯಲು ಇನ್ನೊಂದು ಪ್ರಮುಖ ಅಂಶವೆಂದರೆ, ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಪರೇಷನ್ ಸಿಂಧೂರ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ತಾವು ಮಧ್ಯವರ್ತಿಯಾಗಿದ್ದೇವೆ ಎಂಬ ಹೇಳಿಕೆಯನ್ನು ಮತ್ತೊಮ್ಮೆ ಪುನರಾವರ್ತಿಸಲು ಇದನ್ನು ಬಳಸುವ ಸಾಧ್ಯತೆಯಿತ್ತು ಎನ್ನಲಾಗಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ರಷ್ಯಾದ ತೈಲ ಖರೀದಿಯನ್ನು ಭಾರತ ಮುಂದುವರೆಸಿದ್ದಕ್ಕಾಗಿ ದಂಡದ ರೂಪದಲ್ಲಿ ಟ್ರಂಪ್, ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿದ ನಂತರ ಉಭಯ ರಾಷ್ಟ್ರಗಳ ಸಂಬಂಧಗಳು ಹಳಸಿವೆ ಎನ್ನಲಾಗಿತ್ತು. ಇದೀಗ ಇಸ್ರೆಲ್​ ಹಮಾಸ್​ ಕದನವಿರಾಮದ ಬಳಿಕ ಮತ್ತೆ ಎರಡು ದೇಶಗಳು ಮುಖಾಮುಖಿಯಾಗುವ ಸಾಧ್ಯತೆಗಳಿದ್ದವು.

ಭಾರತ ತನ್ನ ದೇಶದ ನಾಗರಿಕರ ವಿಷಯದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ, ನಮ್ಮ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನ ನೀಡಲು ಇದು ನಿರ್ಣಾಯಕವಾಗಿದೆ ಎಂದು ತಿಳಿಸಿತ್ತು. ಉಭಯ ದೇಶಗಳ ನಡುವಿನ ಇತ್ತೀಚಿನ ಮಾತುಕತೆಗಳ ಹೊರತಾಗಿಯೂ ಬಿಕ್ಕಟ್ಟು ಯಥಾಸ್ಥಿತಿ ಮುಂದುವರೆದಿದೆ. ಭಾರತವು ಸುಂಕಗಳನ್ನು ತೆಗೆದುಹಾಕುವಂತೆ ಅಮೆರಿಕವನ್ನು ಒತ್ತಾಯಿಸಿದೆ. ಟ್ರಂಪ್ ಹೆಚ್ಚುವರಿ ಸುಂಕಗಳನ್ನು ವಿಧಿಸಿದ ಬಳಿಕ, ಪ್ರಧಾನಿ ಮೋದಿ ಕನಿಷ್ಠ ನಾಲ್ಕು ಬಾರಿ ಅಮೆರಿಕ ಅಧ್ಯಕ್ಷರ ಕರೆಗಳನ್ನು ಸ್ವೀಕರಿಸಿಲ್ಲ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಕಳೆದ ತಿಂಗಳು 75 ನೇ ವರ್ಷದ ಹುಟ್ಟುಹಬ್ಬದಂದು ಪ್ರಧಾನಿ ಮೋದಿಗೆ ತಮ್ಮ ಶುಭಾಶಯಗಳನ್ನು ತಿಳಿಸಲು ಕರೆ ಮಾಡಿದಾಗ ಟ್ರಂಪ್​ರೊಂದಿಗೆ ಮಾತನಾಡಿದರು .

ಅಕ್ಟೋಬರ್ 9 ರಂದು, ಪ್ರಧಾನಿ ಮತ್ತೊಮ್ಮೆ ಟ್ರಂಪ್ ಅವರಿಗೆ ಕರೆ ಮಾಡಿ, ಶಾಂತಿ ಯೋಜನೆಯ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು ಮತ್ತು ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net