

Narendra Modi: ಮಾರುತಿ ಸುಜುಕಿಯ ಮೊದಲ ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನವಾದ ಇ ವಿಟಾರಾವನ್ನು 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಆಗಸ್ಟ್ 26) ಚಾಲನೆ ನೀಡಿದರು.
ಗುಜರಾತ್ನ ಹಂಸಲ್ಪುರದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮೇಕ್ ಇನ್ ಇಂಡಿಯಾ ಪ್ರಯಾಣದಲ್ಲಿ ಹೊಸ ಅಧ್ಯಾಯವನ್ನು ಘೋಷಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದಿನಿಂದ ಭಾರತದಲ್ಲಿ ತಯಾರಾದ ವಿದ್ಯುತ್ ವಾಹನಗಳನ್ನು ಯುರೋಪ್ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುವುದು, ನಮ್ಮ ಬ್ಯಾಟರಿ ವಾಹನಗಳು ಪರಿಸರ ವ್ಯವಸ್ಥೆಗೆ ದೊಡ್ಡ ಉತ್ತೇಜನವಾಗಿದೆ ಎಂದರು.
ಜಪಾನ್ ದೇಶದ ಸುಜುಕಿ ಭಾರತದಲ್ಲಿ ಉತ್ಪಾದನೆ ಮಾಡುವುದನ್ನು ನಾವೇಲ್ಲಾ ನೋಡುತ್ತಿದ್ದೇವೆ, ಸದ್ಯ ಕಾರುಗಳನ್ನು ಜಪಾನ್‌ಗೆ ಮರಳಿ ರಫ್ತು ಮಾಡಲಾಗುತ್ತಿದೆ. ಇದು ಜಪಾನ್ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸುವುದರ ಸಂಕೇತ ಮಾತ್ರವಲ್ಲದೆ ಜಾಗತಿಕ ಕಂಪನಿಗಳು ಭಾರತದ ಮೇಲೆ ಹೊಂದಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಒಂದು ರೀತಿಯಲ್ಲಿ, ಮಾರುತಿ ಸುಜುಕಿಯಂತಹ ಕಂಪನಿಗಳು ಮೇಕ್ ಇನ್ ಇಂಡಿಯಾದ ಬ್ರಾಂಡ್ ರಾಯಭಾರಿಗಳಾಗಿವೆ ಎಂದು ಅವರು ತಿಳಿಸಿದರು.
ಭಾರತದ ಯಶೋಗಾಥೆಯ ಬೀಜಗಳನ್ನು ಸುಮಾರು 13 ವರ್ಷಗಳ ಹಿಂದೆ ಬಿತ್ತಲಾಗಿದ್ದು. 2012 ರಲ್ಲಿ, ತಾವೂ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಹಂಸಲ್ಪುರದಲ್ಲಿ ಮಾರುತಿ ಸುಜುಕಿಗೆ ಭೂಮಿ ಮಂಜೂರು ಮಾಡಿದ್ದನ್ನು ನೆನಪಿಸಿಕೊಂಡರು. ಆ ಸಮಯದಲ್ಲಿ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಕೂಡ ಒಂದು ದೃಷ್ಟಿಕೋನವಾಗಿತ್ತು. ಅಂದಿನ ನಮ್ಮ ಪ್ರಯತ್ನಗಳು ಇಂದು ದೇಶದ ನಿರ್ಣಯಗಳನ್ನು ಈಡೇರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿವೆ ಎಂದು ಅವರು ಹೇಳಿದರು.
2017 ರಲ್ಲಿ ಟಿಡಿಎಸ್ ಲಿಥಿಯಂ-ಐಯಾನ್ ಬ್ಯಾಟರಿ ಗುಜರಾತ್ ಪ್ರೈವೇಟ್ ಲಿಮಿಟೆಡ್ ಸ್ಥಾಪನೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತವು ವಿದ್ಯುತ್ ವಾಹನಗಳ ಉತ್ಪಾದನಾ ಕೇಂದ್ರವಾಗಲು ದೇಶೀಯವಾಗಿ ಬ್ಯಾಟರಿಗಳನ್ನು ಉತ್ಪಾದಿಸುವುದು ಅತ್ಯಗತ್ಯ ಎಂದರು.
ಪ್ರಧಾನಿ ಮೋದಿ ತಮ್ಮ ಇತ್ತೀಚಿನ ಕೆಂಪು ಕೋಟೆ ಮೇಲಿನ ಭಾಷಣವನ್ನು ಉಲ್ಲೇಖಿಸಿ, ಮುಂಬರುವ ಹಬ್ಬದ ಋತುವು ಸ್ವಾವಲಂಬನೆಯನ್ನು ಆಚರಿಸಬೇಕು, ಇನ್ನು ಮುಂದೆ ನಾವು ಖರೀದಿಸುವ ಪ್ರತಿ ವಸ್ತು ಭಾರತದಲ್ಲಿ ತಯಾರಿಸಲ್ಪಟ್ಟಿರುವುದೇ ಆಗಿರಬೇಕು ಎಂದರು.
ಇ ವಿಟಾರಾ ಜಾಗತಿಕ ಎಲೆಕ್ಟ್ರಿಕ್ SUV ಆಗಿ ಸ್ಥಾನ ಪಡೆದಿದ್ದು, 4,275mm ಉದ್ದ, 1,800mm ಅಗಲ, 1,640mm ಎತ್ತರ ಮತ್ತು 2,700mm ವೀಲ್‌ಬೇಸ್ ಹೊಂದಿದೆ. ಇದು ಮೋಟಾರ್, ಇನ್ವರ್ಟರ್ ಮತ್ತು ಟ್ರಾನ್ಸ್‌ಮಿಷನ್ ಅನ್ನು ಸಂಯೋಜಿಸುವ 3-ಇನ್-1 ಎಲೆಕ್ಟ್ರಿಕ್ ಸಿಸ್ಟಮ್ ಅನ್ನು ಬಳಸುತ್ತದೆ. ಗ್ರಾಹಕರು ಎರಡು ಬ್ಯಾಟರಿ ಪ್ಯಾಕ್‌ಗಳ ನಡುವೆ ಆಯ್ಕೆ ಹೊಂದಿರುತ್ತಾರೆ: 144hp ಮತ್ತು 189Nm ಉತ್ಪಾದಿಸುವ ಮುಂಭಾಗದ-ಮೌಂಟೆಡ್ ಮೋಟಾರ್‌ನೊಂದಿಗೆ ಜೋಡಿಸಲಾದ 49kWh ಯುನಿಟ್ ಮತ್ತು 174hp ಮತ್ತು 189Nm ಉತ್ಪಾದಿಸುವ ಮುಂಭಾಗದ ಮೋಟಾರ್‌ನೊಂದಿಗೆ ಜೋಡಿಸಲಾದ ದೊಡ್ಡ 61kWh ಯುನಿಟ್.
ಮಾರುತಿ ಸುಜುಕಿ ಇ ವಿಟಾರಾವನ್ನು ದೃಢವಾದ ಚಾರ್ಜಿಂಗ್ ಮತ್ತು ಸೇವಾ ಜಾಲದೊಂದಿಗೆ ಬೆಂಬಲಿಸುತ್ತದೆ. ಮಾಲೀಕರು ಅನುಸ್ಥಾಪನಾ ಸಹಾಯದೊಂದಿಗೆ ಸ್ಮಾರ್ಟ್ ಹೋಮ್ ಚಾರ್ಜರ್‌ಗಳನ್ನು ಸ್ವೀಕರಿಸುತ್ತಾರೆ, ಆದರೆ ಸಾರ್ವಜನಿಕ ವೇಗದ ಚಾರ್ಜಿಂಗ್ ಪಾಯಿಂಟ್‌ಗಳನ್ನು 2-3 ವರ್ಷಗಳಲ್ಲಿ, ಪ್ರತಿ 5-10 ಕಿ.ಮೀ.ಗಳ ಮಧ್ಯಂತರದಲ್ಲಿ ಟಾಪ್ 100 ನಗರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಾರಾಟದ ನಂತರದ ಬೆಂಬಲವನ್ನು ಮತ್ತಷ್ಟು ಬಲಪಡಿಸಲು, ಕಂಪನಿಯು 1,000 ಕ್ಕೂ ಹೆಚ್ಚು ನಗರಗಳಲ್ಲಿ 1,500 ಇವಿ-ಸಿದ್ಧ ಕಾರ್ಯಾಗಾರಗಳನ್ನು ಸ್ಥಾಪಿಸುತ್ತದೆ.(ಏಜೆನ್ಸೀಸ್)