

ಡೆಹ್ರಾಡೂನ್: ಉತ್ತರಾಖಂಡ ಭಾರತದ ಆಧ್ಯಾತ್ಮಿಕ ಪ್ರಯಾಣದ ಹೃದಯದ ಬಡಿತವಾಗಿದ್ದು, ರಾಜ್ಯದ ಸಾಮರ್ಥ್ಯವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ, ಇಲ್ಲಿನ ಸಂಸ್ಕೃತಿ, ಅದರ ನೈಸರ್ಗಿಕ ಸೌಂದರ್ಯಕ್ಕೆ ಬದ್ಧರಾಗಿರುವ ದೇವಭೂಮಿಯ ಜನರು ಇಂದು ಸಂತೋಷದಿಂದ ಇದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದರು.
ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಉತ್ತರಾಖಂಡ ರಚನೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ರಾಜ್ಯದ ಅಭಿವೃದ್ದಿಯನ್ನು ಕೊಂಡಾಡಿದರು.
ದೇವಭೂಮಿ ಉತ್ತರಾಖಂಡ ಭಾರತದ ಆಧ್ಯಾತ್ಮಿಕ ಪ್ರಯಾಣದ ಹೃದಯದ ಬಡಿತ, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರಿನಾಥ ಮತ್ತು ಇತರ ಅನೇಕ ತೀರ್ಥಯಾತ್ರೆಗಳು ನಮ್ಮ ನಂಬಿಕೆಯ ಸಂಕೇತಗಳಾಗಿದ್ದು, ಇಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ, ಜನರು ತಮ್ಮ ಭಕ್ತಿಯ ಜೊತೆಗೆ ರಾಜ್ಯದ ಆರ್ಥಿಕತೆಗೂ ನೆರವಾಗುತ್ತಿದ್ದಾರೆ ಎಂದರು.
ರಾಜ್ಯ ಸ್ಥಾನಮಾನಕ್ಕೂ ಮುನ್ನ ಉತ್ತರಾಖಂಡದ ಬಜೆಟ್ 4,000 ಕೋಟಿ ರೂ.ಗಳಾಗಿತ್ತು, ಮತ್ತು ಇಂದು ಅದು 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಕಳೆದ 25 ವರ್ಷಗಳಲ್ಲಿ, ಉತ್ತರಾಖಂಡದಲ್ಲಿ ವಿದ್ಯುತ್ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿದ್ದು. ರಾಜ್ಯದ ರಸ್ತೆಗಳ ಉದ್ದವು ಎರಡು ಪಟ್ಟು ಹೆಚ್ಚಾಗಿದೆ. ಮೊದಲು ಕೇವಲ 1 ವೈದ್ಯಕೀಯ ಕಾಲೇಜು ಇತ್ತು, ಇಂದು 10 ವೈದ್ಯಕೀಯ ಕಾಲೇಜುಗಳಿವೆ, ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ ವಿಮಾನದ ಮೂಲಕ 6 ತಿಂಗಳ ಅವಧಿಯಲ್ಲಿ 4,000 ಪ್ರವಾಸಿಗರು ಉತ್ತರಾಖಂಡಕ್ಕೆ ಭೇಟಿ ನೀಡುವ ಕಾಲವೊಂದಿತ್ತು. ಆದರೆ ಇಂದು, ಪ್ರತಿದಿನ 4,000 ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದಲ್ಲಿ 8,260 ಕೋಟಿ ರೂ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಕುಡಿಯುವ ನೀರು, ನೀರಾವರಿ, ತಾಂತ್ರಿಕ ಶಿಕ್ಷಣ, ಇಂಧನ, ನಗರಾಭಿವೃದ್ಧಿ, ಕ್ರೀಡೆ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. ಉದ್ಘಾಟನೆಯಾದ ಯೋಜನೆಗಳಲ್ಲಿ ಅಮೃತ್ ಯೋಜನೆಯಡಿ 23 ವಲಯಗಳಿಗೆ ಡೆಹ್ರಾಡೂನ್ ನೀರು ಸರಬರಾಜು ವ್ಯಾಪ್ತಿ, ಪಿಥೋರಗಢ ಜಿಲ್ಲೆಯ ವಿದ್ಯುತ್ ಸಬ್‌ಸ್ಟೇಷನ್, ಸರ್ಕಾರಿ ಕಟ್ಟಡಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳು, ನೈನಿತಾಲ್‌ನ ಹಲ್ದ್ವಾನಿ ಕ್ರೀಡಾಂಗಣದಲ್ಲಿರುವ ಆಸ್ಟ್ರೋಟರ್ಫ್ ಹಾಕಿ ಮೈದಾನ ಸೇರಿವೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಾಜ್ಯ ರಚನೆಗಾಗಿ ಹೋರಾಟ ನಡೆಸಿದ ಕಾರ್ಯಕರ್ತರಿಗೆ ಶನಿವಾರ ಪಿಂಚಣಿ ಹೆಚ್ಚಳವನ್ನು ಘೋಷಿಸಿದ್ದು, ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರ ಹೆಸರನ್ನು ಪ್ರಮುಖ ಮೂಲಸೌಕರ್ಯ ಸೌಲಭ್ಯಗಳಿಗೆ ಇಡುವ ಆಲೋಚನೆ ಇದೆ ಎಂದು ಇದೇ ವೇಳೆ ಅವರು ಹೇಳಿದರು. ಚಳವಳಿಯ ಸಮಯದಲ್ಲಿ ಕನಿಷ್ಠ ಏಳು ದಿನಗಳನ್ನು ಜೈಲಿನಲ್ಲಿ ಕಳೆದ ಅಥವಾ ಗಾಯಗೊಂಡವರಿಗೆ ಮಾಸಿಕ 6,000 ರೂ.ಗಳಿಂದ 7,000 ರೂ.ಗಳಿಗೆ ಪಿಂಚಣಿ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಧಾಮಿ ಇತರ ಕಾರ್ಯಕರ್ತರಿಗೆ ತಿಂಗಳಿಗೆ 4,500 ರೂ.ಗಳಿಂದ 5,500 ರೂ.ಗಳಿಗೆ ಪಿಂಚಣಿ ಹೆಚ್ಚಿಸುವುದಾಗಿಯೂ ಘೋಷಿಸಿದರು.(ಏಜೆನ್ಸೀಸ್)