ಪೋಲೆಂಡ್​ನಲ್ಲಿ ಪ್ರಧಾನಿ ಮೋದಿ; 45 ವರ್ಷಗಳಲ್ಲಿ ಭಾರತದ ಪ್ರಧಾನಿಯ ಮೊದಲ ಭೇಟಿ

Untitled-design-2024-08-21T193718.901
Published on

ವಾರ್ಸಾ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪೋಲೆಂಡ್ ಮತ್ತು ಉಕ್ರೇನ್‌ ಪ್ರವಾಸದಲ್ಲಿ ಮೊದಲಿಗೆ ಪೋಲೆಂಡ್‌ಗೆ ಬುಧವಾರ (ಆಗಸ್ಟ್ 21) ಸಂಜೆ ತಲುಪಿದರು. ವಿಶೇಷವೆಂದರೆ ಕಳೆದ 45 ವರ್ಷಗಳಲ್ಲಿ ಪೋಲೆಂಡ್‌ಗೆ ಭಾರತೀಯ ಪ್ರಧಾನಿಯೊಬ್ಬರು ಭೇಟಿ ನೀಡಿರುವುದು ಇದೇ ಮೊದಲಾಗಿದೆ.

ವಾರ್ಸಾದ ಹೋಟೆಲ್ ತಲುಪಿದ ಬಳಿಕ ಭಾರತೀಯ ಮೂಲದವರಿಗೆ ಪ್ರಧಾನಿ ಮೋದಿ ಅವರು ಶುಭ ಕೋರಿದ ಬಳಿಕ ಮಕ್ಕಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಕ್ಕೆ 70 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆಯುತ್ತಿದೆ. ಪ್ರಧಾನಿ ಮೋದಿ ಅವರ ನಿರ್ಗಮನದ ಮೊದಲು ಪಿಎಂಒ ಕಚೇರಿ ನೀಡಿದ್ದ ಅಧಿಕೃತ ಮಾಹಿತಿ ಪತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿತ್ತು.

ಪೋಲೆಂಡ್ ಮಧ್ಯ ಯೂರೋಪಿನಲ್ಲಿ ನಮ್ಮ ಪ್ರಮುಖ ಆರ್ಥಿಕ ಪಾಲುದಾರ. ಭಾರತ ಮತ್ತು ಪೋಲೆಂಡ್‌ನ ಪರಸ್ಪರ ಬದ್ಧತೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿಯ ಪ್ರಮುಖ ಗಮನವು ರಕ್ಷಣಾ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ಮೇಲೆ ಇರುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

1955ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್​ ನೆಹರು, 1967ರಲ್ಲಿ ಇಂದಿರಾಗಾಂಧಿ ಅವರು ಪೋಲೆಂಡ್​​​​​ಗೆ ಭೇಟಿ ನೀಡಿದ್ದರು. ಇದಾದ ಬಳಿಕ 1979ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಪೋಲೆಂಡ್​ಗೆ ಭೇಟಿ ನೀಡಿದ್ದರು. ಅವರ ಬಳಿಕ ಭಾರತದ ಪ್ರಧಾನಿಗಳು ಪೋಲೆಂಡ್​ಗೆ ಹೋಗಿರಲಿಲ್ಲ. ಈಗ ಪ್ರಧಾನಿ ಅವರು ಭೇಟಿ ನೀಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net