ಪ್ರತಿ ಕನ್ನಡಿಗನ ಕನಸು, ನನ್ನ ಕನಸು, ನಿಮ್ಮ ನಿರ್ಣಯವೇ ನನ್ನ ನಿರ್ಣಯ: ಪ್ರಧಾನಿ ಮೋದಿ

modi
Published on

ದೆಹಲಿ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಪರಿಗಣನೆಗೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ರಾಜ್ಯ ಜನತೆಗೆ ವಿಶೇಷ ಸಂದೇಶವೊಂದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. "ಪ್ರತಿಯೊಬ್ಬ ಕನ್ನಡಿಗನ ಕನಸು, ನನ್ನ ಕನಸು. ನಿಮ್ಮ ನಿರ್ಣಯವೇ ನನ್ನ ನಿರ್ಣಯ" ಎಂದು ಕನ್ನಡಿಗರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ದೇಶದ ಆರ್ಥಿಕತೆಗೆ ಕರ್ನಾಟಕ ನೀಡಿರುವ ಮಹತ್ವದ ಕೊಡುಗೆಗಳ ಬಗ್ಗೆ ಮಾತನಾಡಿರುವ ಅವರು, "ವಿಶ್ವದಲ್ಲಿ ಭಾರತವು 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದ್ದು, ಶೀಘ್ರವೇ ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಯನ್ನು ಹೊಂದಿರುವ ದೇಶಗಳ ಪೈಕಿ ಒಂದಾಗಬೇಕು. ಕರ್ನಾಟಕದ ಆರ್ಥಿಕತೆಯು ತ್ವರಿತವಾಗಿ ಅಭಿವೃದ್ಧಿಯನ್ನು ಹೊಂದಿದಾಗ ಮಾತ್ರ ಇದು ಸಾಧ್ಯ" ಎಂದು ಹೇಳಿದ್ದಾರೆ.

ಡಬಲ್ ಇಂಜಿನ್ ಸರ್ಕಾರದ 3.5 ವರ್ಷಗಳ ಆಡಳಿತಾವಧಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ನಿರ್ಣಾಯಕ, ಕೇಂದ್ರೀಕೃತ ಮತ್ತು ಭವಿಷ್ಯದ ವಿಧಾನವು ಕರ್ನಾಟಕದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ವಿದೇಶಿ ಬಂಡವಾಳ, ಕೈಗಾರಿಕೆ ಮತ್ತು ಆವಿಷ್ಕಾರ, ಶಿಕ್ಷಣ, ಉದ್ಯೋಗ, ಉದ್ಯಮಶೀಲತೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆಯಬೇಕು. ಕರ್ನಾಟಕವನ್ನು ಕೃಷಿಯಲ್ಲಿ ನಂಬರ್ ಒನ್ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕರ್ನಾಟಕದ ಪರಂಪರೆ ಹಾಗೂ ಸಾಂಸ್ಕೃತಿಯಲ್ಲಿ ಆ ಸಾಮರ್ಥ್ಯವಿದೆ" ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಆರ್ಥಿಕತೆಯನ್ನು ಎತ್ತಿ ಹಿಡಿದ ಪ್ರಧಾನಿ,"ಕರ್ನಾಟಕವನ್ನು ನಂಬರ್ ಒನ್ ಮಾಡಲು ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಮೇ 10ರಂದು ಮತ ಚಲಾಯಿಸುವಂತೆ ನಿಮ್ಮೆಲ್ಲರಿಗೆ ನಾನು ವಿನಂತಿಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net