ಪ್ರಧಾನಿ ಮೋದಿ ತಾಯಿ ನಿಂದನೆ ಖಂಡನಾರ್ಹ; ಆದರೆ ಬಿಜೆಪಿಯವರು ಏನು ಕಮ್ಮಿ ಇಲ್ಲ ಎಂದ ತೇಜಸ್ವಿ ಯಾದವ್ | Tejashwi Yadav

Tejashwi Yadav 1
Published on

Tejashwi Yadav: ಬಿಹಾರದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಮತದಾರ ಅಧಿಕಾರ ಯಾತ್ರೆಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ಮೋದಿಯವರ ದಿವಂಗತ ತಾಯಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಯನ್ನು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಖಂಡಿಸಿದ್ದಾರೆ. ಜೊತೆಗೆ ಮಹಿಳೆಯನ್ನು ನಿಂದಿಸುವುದರಲ್ಲಿ ಬಿಜೆಪಿ ನಾಯಕರೇನು ಕಮ್ಮಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ತೇಜಸ್ವಿ ಯಾದವ್, ಯಾರ ತಾಯಿ ಬಗ್ಗೆಯೂ ಇನ್ನೊಬ್ಬರು ಅವಹೇಳನಕಾರಿ ಭಾಷೆಯನ್ನು ಬಳಸಬಾರದು ಎಂದು ನಾನು ಹೇಳಲು ಬಯಸುತ್ತೇನೆ. ನಾವು ಇದನ್ನು ಖಂಡಿಸುತ್ತೇವೆ. ಅದು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂದು ಹೇಳಿದರು. ಹಾಗೆಯೇ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ ಅವರು, ಬಿಜೆಪಿ ನಾಯಕರು ಮಹಿಳೆಯರನ್ನು ನಿಂದಿಸುವುದರಲ್ಲಿ ಏನು ಕಮ್ಮಿ ಇಲ್ಲ ಎಂದರು.

ಬಿಹಾರದಲ್ಲಿ ನಡೆದ ಆರ್‌ಜೆಡಿ-ಕಾಂಗ್ರೆಸ್ ಜಂಟಿ ಮತದಾರ ಯಾತ್ರಾದಲ್ಲಿ ತಮ್ಮ ದಿವಂಗತ ತಾಯಿಗೆ ಮಾಡಲಾದ ನಿಂದನೆ ಮತ್ತು ಅವಮಾನದಿಂದ ತೀವ್ರ ನೋವುಂಟಾಗಿದೆ ಎಂದು ಪ್ರಧಾನಿ ಮೋದಿ ನಿನ್ನೆ ಹಂಚಿಕೊಂಡಿದ್ದರು. ಇದು ದೇಶದ ಎಲ್ಲಾ ತಾಯಂದಿರಿಗೆ ಮಾಡಿದ ಅವಮಾನ ಎಂದು ಅವರು ಬಣ್ಣಿಸಿದ್ದರು.ಒಬ್ಬ ಮಗನಾಗಿ, ಇದು ನನಗೆ ತುಂಬಾ ನೋವಿನ ಕ್ಷಣ. ಇಷ್ಟೊಂದು ಮಟ್ಟದ ರಾಜಕೀಯವನ್ನು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದರು.

ಬಿಹಾರದಲ್ಲಿ ಮಹಿಳಾ ಮತದಾರರ ಬೆಂಬಲ ಪಡೆಯಲು ಎನ್‌ಡಿಎ ಈಗ 'ಮಾ ಕಾ ಸಮ್ಮಾನ್' ಎಂಬ ಬೃಹತ್ ಅಭಿಯಾನವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ತಾತ್ಕಾಲಿಕ ಕಾರ್ಯತಂತ್ರದ ಭಾಗವಾಗಿ ಹಿರಿಯ ಎನ್‌ಡಿಎ ನಾಯಕರು ಬಿಹಾರದಾದ್ಯಂತ ಪ್ರಯಾಣಿಸಿ ಮಹಿಳೆಯರೊಂದಿಗೆ, ವಿಶೇಷವಾಗಿ ಹಿರಿಯ ನಾಗರಿಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net