ತಾಯಿ ಹೀರಾಬೆನ್​ ನಿಧನ, ಭಾವುಕರಾದ ಪ್ರಧಾನಿ: ನನ್ನ ಅಮ್ಮನಲ್ಲಿ ತ್ರಿಮೂರ್ತಿಗಳನ್ನ ಕಂಡಿರುವೆ, ಶಕ್ತಿ-ಪ್ರೀತಿ-ವಾತ್ಸಲ್ಯ ಅನುಭಸಿದೆ…

modi heeraben
Published on

ಅಹಮದಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ(100) ಶುಕ್ರವಾರ ಬೆಳಗಿನಜಾವ ನಿಧನರಾದರು. ಹೀರಾಬೆನ್​ ಇನ್ನಿಲ್ಲ ಎಂಬ ಸುದ್ದಿ ಕೇಳಿ ದೇಶಾದ್ಯಂತ ಜನತೆ, ಗಣ್ಯರು ಕಂಬನಿ ಮಿಡಿದಿದ್ದಾರೆ. ತಾಯಿ ನೆನೆದು ಅತ್ಯಂತ ಭಾವುಕರಾಗಿರುವ ಪ್ರಧಾನಿ ಮೋದಿ ಅವರು, ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

'ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ನನ್ನ ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರುಗಳ ಶಕ್ತಿ, ಪ್ರೀತಿ, ವಾತ್ಸಲ್ಯವನ್ನು ಅನುಭವಿಸಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಸ್ವಾರ್ಥ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು ನನ್ನ ತಾಯಿ' ಎಂದು ಬರೆದುಕೊಂಡು ಹೀರಾಬೆನ್​ರ ಫೋಟೋವನ್ನು ಹಾಕಿಕೊಂಡಿದ್ದಾರೆ.

ಹೀರಾಬೆನ್​ ಮೋದಿ ಅವರಿಗೆ ದೇಶಾದ್ಯಂತ ಕೋಟ್ಯಂತರ ಜನತೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ರಾಜನಾಥ್​ ಸಿಂಗ್​, ಅಮಿತ್​ ಶಾ, ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಸೇರಿದಂತೆ ಸಹಸ್ರಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net