

ಬ್ರೆಜಿಲ್: ಫುಟ್ಬಾಲ್ ದಂತಕಥೆ ಪೀಲೆ ಎಂದೇ ಖ್ಯಾತರಾಗಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ(82) ಅವರು ಗುರುವಾರ ತಡರಾತ್ರಿ ನಿಧನರಾದರು.
ಫುಟ್ಬಾಲ್ನ ಮಾಸ್ಟರ್ ಮೈಂಡ್, ಬ್ರೆಜಿಲ್ನ ಸ್ಟಾರ್ ಆಟಗಾರ ಪೀಲೆ ಅವರು ಮೂರು ಬಾರಿ(1958, 1962 ಮತ್ತು 1970) ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ ತಂಡವನ್ನ ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೆಲ ವರ್ಷಗಳಿಂದ ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪೀಲೆ ಅವರಿಗೆ ಕಳೆದ ವರ್ಷ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಕಳೆದ ತಿಂಗಳು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ನವೆಂಬರ್ ಕೊನೇ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿಮೊಥೆರಪಿ ಚಿಕಿತ್ಸೆಗೆ ಅವರ ದೇಹ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಕ್ಯಾನ್ಸರ್ ಉಲ್ಬಣಗೊಂಡಿತ್ತು. ಉಸಿರಾಟ ಸಮಸ್ಯೆಯಿಂದಲೂ ಬಳಲುತ್ತಿದ್ದರು. ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಿತ್ತಾದರೂ ಪ್ರಯೋಜನವಾಗಲಿಲ್ಲ. ಗುರುವಾರ ತಡರಾತ್ರಿ ಆಸ್ಪತ್ರೆಯಲ್ಲೇ ಬ್ರೆಜಿಲ್ನ ದಂತಕಥೆ ಪೀಲೆ ಕೊನೆಯುಸಿರೆಳೆದರು. ತಂದೆ ಇನ್ನಿಲ್ಲ ಎಂಬ ಸುದ್ದಿಯಲ್ಲಿ ಅವರ ಪುತ್ರಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಗಣ್ಯರು, ಅಭಿಮಾನಿಗಳು ಪೀಲೆ ಅವರ ನಿಧನದ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ.
1940ರ ಅಕ್ಟೋಬರ್ 23ರಂದು ಬ್ರೆಜಿಲ್ನ ಟ್ರೆಸ್ ಕೊರಾಕೋಸ್ನಲ್ಲಿ ಜನಿಸಿದ್ದ ಪೀಲೆ ಅವರು 1957ರಲ್ಲಿ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಪದಾರ್ಪಣೆ ಮಾಡಿದರು. 1000ಕ್ಕೂ ಹೆಚ್ಚು ಗೋಲ್ಗಳನ್ನು ದಾಖಲಿಸಿದ್ದರು. 1977ರಲ್ಲಿ ನಿವೃತ್ತಿ ಘೋಷಿಸಿದ್ದರು. 1995-98ರ ಅವಧಿಯಲ್ಲಿ ಬ್ರೆಜಿಲ್ ದೇಶದ ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮೂರು ಮದುವೆ ಆಗಿದ್ದ ಪೀಲೆ ಅವರಿಗೆ 7 ಮಕ್ಕಳಿದ್ದಾರೆ. (ಏಜೆನ್ಸೀಸ್)