

ನವದೆಹಲಿ: ಕರೊನಾ ಅಂಧಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಲುವಾಗಿ ನರೇಂದ್ರ ಮೋದಿಯವರು ದೇಶದ ಜನರಲ್ಲಿ ದೀಪ ಹಚ್ಚುವಂತೆ ಕರೆ ನೀಡಿದ್ದರು.
ಏ.5ರಂದು ರಾತ್ರಿ 9 ಗಂಟೆಗೆ 9 ನಿಮಿಷ ಮನೆಯ ವಿದ್ಯುತ್ ಲೈಟ್ಗಳನ್ನು ಆರಿಸಿ, ಬಾಲ್ಕನಿಗೋ, ಬಾಗಿಲ ಬಳಿಯೋ ಬಂದು ದೀಪ, ಮೊಂಬತ್ತಿ, ಮೊಬೈಲ್ ಫ್ಲಾಶ್ ಅಥವಾ ಟಾರ್ಚ್ ಮೂಲಕ ಬೆಳಕು ಹೊತ್ತಿಸಿ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ದೇಶದ ಜನರು ಸ್ಪಂದಿಸಿದ್ದಾರೆ. ನಿನ್ನೆ ರಾತ್ರಿ ಅದೆಷ್ಟೋ ಜನರು ದೀಪ ಬೆಳಗಿದ್ದಾರೆ.
ಈ ಸಮಯದಲ್ಲಿ ವಿದ್ಯುತ್ ಪೂರೈಕೆಯ ಪ್ರಮಾಣ ಎಷ್ಟು ಕಡಿಮೆ ಆಗಿತ್ತು ಎಂಬ ಬಗ್ಗೆ ಇಂಧನ ಸಚಿವಾಲಯ ತಿಳಿಸಿದೆ.
ದೆಹಲಿಯಲ್ಲಿರುವ ರಾಷ್ಟ್ರೀಯ ಇಂಧನ ಉಸ್ತುವಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಇಂಧನ ಖಾತೆ ರಾಜ್ಯ ಸಚಿವ ಆರ್. ಕೆ.ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರು ದೀಪ ಬೆಳಗಲು ನೀಡಿದ್ದ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 117 ಗಿಗಾ ವ್ಯಾಟ್ ಇದ್ದ ವಿದ್ಯುತ್ ಬೇಡಿಕೆ ಆ ಸಮಯದಲ್ಲಿ ರಾಷ್ಟ್ರಾದ್ಯಂತ 85.3 ಗಿಗಾ ವ್ಯಾಟ್ಗೆ ಇಳಿದಿತ್ತು. ಅಂದರೆ ಸುಮಾರು 35 ಗಿಗಾ ವ್ಯಾಟ್ಗಳಷ್ಟು ಕಡಿಮೆಯಾಗಿತ್ತು ಎಂದಿದ್ದಾರೆ.
ಆ 9 ನಿಮಿಷಗಳು ಮುಗಿದ ಬಳಿಕ ಮತ್ತೆ ವಿದ್ಯುತ್ ಪೂರೈಕೆ 110 ಗಿಗಾ ವ್ಯಾಟ್ಗೆ ಏರಿಕೆ ಆಯಿತು. ಈ ಸಂದರ್ಭವನ್ನು ಇಂಜಿನಿಯರ್ಗಳೂ ಸೂಕ್ತವಾಗಿ ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. (ಏಜೆನ್ಸೀಸ್)