

ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗವನ್ನು ಬಡಿಯುತ್ತಿದೆ. ಅಲ್ಲಿ ಶುರುವಾದ ವೈರಸ್ ಜಪಾನ್, ಥೈಲ್ಯಾಂಡ್, ಭಾರತ ಸೇರಿ ಕೆಲವು ದೇಶಗಳಿಗೆ ಹಬ್ಬಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಚೀನಾದಲ್ಲಿ ವೈರಸ್ ಪೀಡಿತ ಪ್ರದೇಶದಲ್ಲಿದ್ದ ಭಾರತೀಯರನ್ನು ಈಗಾಗಲೇ ವಾಪಸ್ ಕರೆಸಲಾಗಿದೆ.
ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಪತ್ರ ಬರೆದಿದ್ದು, ಕೊರೊನಾ ವೈರಸ್ ಎದುರಿಸಲು, ಅದರ ನಿಯಂತ್ರಣ, ಚಿಕಿತ್ಸೆಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ನಿಂದ ತೀವ್ರ ಸಂಕಷ್ಟಕೊಳಗಾಗಿರುವ ಚೀನಾದ ಜನತೆ ಮತ್ತು ಅದನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿರುವ ಸರ್ಕಾರದೊಂದಿಗೆ ಭಾರತ ನಿಲ್ಲುತ್ತದೆ. ನಮ್ಮಿಂದಾಗುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಮೋದ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಚೀನಾದೊಂದಿಗೆ ಒಗ್ಗಟ್ಟಿನ ಮಾತು ಆಡಿರುವ ಪ್ರಧಾನಿ ನರೇಂದ್ರ ಮೋದಿ, ಇಲ್ಲಿಯವರೆಗೆ ವೈರಸ್ನಿಂದಾಗಿ ಜೀವ ಕಳೆದುಕೊಂಡವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ತೀವ್ರವಾಗಿ ವೈರಸ್ ಪೀಡಿತವಾಗಿದ್ದ ಹುಬೈ ಪ್ರಾಂತ್ಯದಿಂದ ಸುಮಾರು 650 ಮಂದಿ ಭಾರತೀಯರನ್ನು ಸ್ಥಳಾಂತರಿಸಲು ಸೂಕ್ತ ವ್ಯವಸ್ಥೆ ಮಾಡಿಕೊಟ್ಟ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಮೋದಿ ಶ್ಲಾಘಿಸಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಚೀನಾದಲ್ಲಿ ಇದುವರೆಗೆ 811 ಮಂದಿ ಮೃತಪಟ್ಟಿದ್ದಾರೆ. ಸುಮಾರು 37,198 ಮಂದಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. (ಏಜೆನ್ಸೀಸ್)