

ನವದೆಹಲಿ: ಕರೊನಾ ವೈರಸ್ ನಿಯಂತ್ರಣಕ್ಕಾಗಿ 21ದಿನಗಳ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಏ.14ರಂದು ಅದು ಮುಕ್ತಾಯವಾಗಲಿದೆ. ಆದರೆ ದಿನೇದಿನೆ ಏರುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ನೋಡಿದರೆ ಲಾಕ್ಡೌನ್ ಮುಂದುವರಿಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದು, ಕೆಲವೇ ಹೊತ್ತಲ್ಲಿ ಲಾಕ್ಡೌನ್ ಮುಂದುವರಿಯಲಿದೆಯಾ? ಕರೊನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದಿನ ಕ್ರಮವೇನು ಎಂಬುದು ತಿಳಿಯಲಿದೆ. ಒಡಿಶಾ ಮತ್ತು ಪಂಜಾಬ್ಗಳು ಈಗಾಗಲೇ ಲಾಕ್ಡೌನ್ ಅವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿಕೊಂಡಿವೆ. ಹಾಗೇ ಬಹುತೇಕ ರಾಜ್ಯಗಳೂ ಸಹ ಲಾಕ್ಡೌನ್ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂಗಳ ಸಭೆ ಪ್ರಾರಂಭ ಮಾಡಿದ್ದಾರೆ. ನರೇಂದ್ರ ಮೋದಿಯವರು ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿಕೊಂಡು ಮೀಟಿಂಗ್ನಲ್ಲಿ ಪಾಲ್ಗೊಂಡಿದ್ದು, ಆ ಫೋಟೋ ವೈರಲ್ ಆಗಿದೆ.
ಕರೊನಾ ಬಗ್ಗೆ ನರೇಂದ್ರ ಮೋದಿಯವರು ಈಗಾಗಲೇ ಹಲವು ಬಾರಿ ಅರಿವು ಮೂಡಿಸಿದ್ದಾರೆ. ಮಾಸ್ಕ್ ಧರಿಸಿಕೊಂಡೇ ಹೊರಗೆ ಹೋಗಿ, ಮನೆಯಲ್ಲಿ ಇರುವಾಗಲೂ ಮಾಸ್ಕ್ ಧರಿಸಿಯೇ ಇರಿ ಎಂಬ ಸಂದೇಶವನ್ನು ದೇಶದ ಜನರಿಗೆ ನೀಡಿದ್ದಾರೆ. ಈಗ ಅದನ್ನು ಸ್ವತಃ ಅವರು ಪಾಲಿಸುತ್ತಿದ್ದಾರೆ. ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲೂ ಮಾಸ್ಕ್ ಧರಿಸಿಯೇ ಪಾಲ್ಗೊಂಡು ಮಾದರಿಯಾಗಿದ್ದಾರೆ. (ಏಜೆನ್ಸೀಸ್)