

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 62ನೇ ಮನ್ ಕೀ ಬಾತ್ನಲ್ಲಿ ದೇಶದ ಜನರೊಂದಿಗೆ ಮಾತನಾಡಿದರು.
ಈ ವೇಳೆ ತಾವು ಹುನಾರ್ ಹಾತ್ (ಇಂಡಿಯಾ ಗೇಟ್ ಬಳಿ ನಡೆದ ಕರಕುಶಲ ಮೇಳ)ಗೆ ಭೇಟಿ ನೀಡಿದ್ದ ಬಗ್ಗೆ ವಿವರಿಸಿದರು. ಅಲ್ಲದೆ ಈ ಹುನಾರ್ ಹಾತ್ ಭಾರತದ ವೈವಿಧ್ಯತೆ ಮತ್ತು ಏಕತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಭಾರತದ ಕಲೆ ಮತ್ತು ಕರಕುಶಲ ಪರಂಪರೆಯನ್ನು ಹುನಾರ್ ಹಾತ್ ಅನಾವರಣ ಮಾಡುತ್ತದೆ. ಅಲ್ಲದೆ ಮಹಿಳಾ ಸಬಲೀಕರಣಕ್ಕೆ ಸಾಕ್ಷಿ ಎಂದು ಮೋದಿ ಹೇಳಿದರು. ನೀವು ಕೂಡ ಈ ಕರಕುಶಲ ಮೇಳಕ್ಕೆ ಆಗಮಿಸಿ ಎಂದು ದೇಶದ ಜನರಿಗೆ ಹೇಳಿದರು.
ಹಾಗೇ ಭಾರತದ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡಿದ ನರೇಂದ್ರ ಮೋದಿಯವರು, ಭಾರತದ ನಾರಿಶಕ್ತಿ ಹೊಸ ಎತ್ತರಕ್ಕೆ ಏರಿದೆ ಎಂದು ಹೇಳಿದರು.
ಈ ಬಾರಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಕೇಂದ್ರ ಕರಕುಶಲ ಮೇಳವನ್ನು ಇಂಡಿಯಾ ಗೇಟ್ ಬಳಿಯ ರಾಜಪಥದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಮೇಳಕ್ಕೆ ಮೋದಿಯವರು ಆಕಸ್ಮಿಕವಾಗಿ ಭೇಟಿ ನೀಡಿ ಲಿಟ್ಟಿ ಚೋಕಾ ಮತ್ತು ಚಹಾ ಸವಿದಿದ್ದರು. ಹಾಗೇ ಅಲ್ಲಿ ಇದ್ದವರ ಬಳಿ ಮಾತುಕತೆ ನಡೆಸಿದ್ದರು.
ದಕ್ಷಿಣ ಅಮೆರಿಕಾದ ಅತ್ಯಂತ ಎತ್ತರ ಪರ್ವತ ಅಕೋನ್ಕಾಗುವಾವನ್ನು ಏರುವ ಮೂಲಕ ದಾಖಲೆ ಸೃಷ್ಟಿಸಿದ ಭಾರತದ 12 ವರ್ಷದ ಬಾಲಕಿ ಕಾಮ್ಯಾ ಕಾರ್ತಿಕೇಯನ್ ಅವರನ್ನು ನರೇಂದ್ರ ಮೋದಿಯವರು ಮನ್ ಕೀ ಬಾತ್ನಲ್ಲಿ ಹೊಗಳಿದರು.
ನಮ್ಮ ದೇಶದ ಮಹಿಳೆಯರ ಉದ್ಯಮಶೀಲತೆ, ಅವರ ಧೈರ್ಯ, ಸಾಹಸಗಳೆಲ್ಲ ನಮ್ಮಲ್ಲಿ ಹೆಮ್ಮೆ ಮೂಡಿಸುತ್ತವೆ. 12 ವರ್ಷದ ಬಾಲಕಿ ಕಾಮ್ಯಾಳ ಸಾಹಸವನ್ನು ನಾನು ಇಲ್ಲಿ ಹೇಳಲೇಬೇಕು. ಕಾಮ್ಯಾಳಿಗೆ ಈಗ 'ಮಿಷನ್ ಸಾಹಸ್' ಎಂದು ಹೆಸರಿಡಲಾಗಿದೆ. ಮಿಷನ್ ಸಾಹಸ್ನಡಿ ಆಕೆ ಎಲ್ಲ ಖಂಡಗಳ ಅತ್ಯಂತ ಎತ್ತರದ ಪರ್ವತಗಳನ್ನು ಏರಲು ಯತ್ನಿಸಲಿ. ಉತ್ತರ, ದಕ್ಷಿಣ ತುದಿಗಳನ್ನು ಮೆಟ್ಟಲಿ. ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಕಾಮ್ಯಾ ಈ ದೇಶದ ಯುವಜನತೆಗೆ ಪ್ರೇರಣೆಯಾಗಿದ್ದಾಳೆ ಎಂದು ಹೇಳಿದ್ದಾರೆ.
ಶ್ರೀಹರಿಕೋಟಾದಲ್ಲಿ 10,000 ಆಸನಗಳ ವ್ಯವಸ್ಥೆಯಿರುವ ಗ್ಯಾಲರಿಯೊಂದನ್ನು ನಿರ್ಮಿಸಲಾಗಿದೆ. ಶ್ರೀಹರಿಕೋಟಾದಿಂದ ಉಡ್ಡಯನವಾಗುವ ರಾಕೆಟ್ನ್ನು ಈ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಬಹುದಾಗಿದೆ. ರಾಕೆಟ್ ಉಡ್ಡಯನ, ಚಂದ್ರಯಾನದಂತಹ ವಿಚಾರಗಳಲ್ಲಿ ಮಕ್ಕಳಿಗೂ ಅತ್ಯುತ್ಸಾಹವಿದೆ. ಈ ಬಗ್ಗೆ ನಾನು ಚಂದ್ರಯಾನ-2ಗಾಗಿ ಬೆಂಗಳೂರಿಗೆ ಹೋದಾಗ ಗಮನಿಸಿದ್ದೇನೆ ಎಂದರು. (ಏಜೆನ್ಸೀಸ್)
ಹಾಗೇ ಭಾರತದ ಯುವಜನರು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ.