

ಜೈಪುರ: ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣವಾಗಿರುವ ಶಾಂತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು.
ಜೈನಾಚಾರ್ಯ ಶ್ರೀ ವಿಜಯ್ ವಲ್ಲಭ್ ಸುರಿಶ್ವರ್ ಜಿ ಮಹಾರಾಜ್ ಅವರ 151ನೇ ಜಯಂತಿ ಹಿನ್ನೆಲೆಯಲ್ಲಿ ಶಾಂತಿ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ವಿಜಯ್ ವಲ್ಲಭ್ ಸುರಿಶ್ವರ್ ಜಿ ಮಹಾರಾಜ್ ದೇಶ ಸೇವೆಗೆ ತಮ್ಮ ಜೀವನ ಅರ್ಪಿಸಿದವರು. ಇಂತಹ ಮಹಾನ್ ವ್ಯಕ್ತಿಗಳ (ಏಕತಾ ಪ್ರತಿಮೆ ಮತ್ತು ಶಾಂತಿ ಪ್ರತಿಮೆ) ಪ್ರತಿಮೆ ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ ಎಂದು ಹೇಳಿದರು.
151 ಇಂಚು ಎತ್ತರದ ಪ್ರತಿಮೆಯನ್ನು ಅಷ್ಟಧಾತು (8 ಲೋಹ)ವಿನಿಂದ ತಯಾರಿಸಲಾಗಿದ್ದು, ತಾಮ್ರ ಪ್ರಮುಖ ಘಟಕವಾಗಿದೆ. ರಾಜಸ್ಥಾನದ ಪಾಲಿಯಲ್ಲಿರುವ ಜೆಟ್‌ಪುರದ ವಿಜಯ್ ವಲ್ಲಭ ಸಾಧನಾ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.
ಶ್ರೀ ವಿಜಯ್ ವಲ್ಲಭ ಸುರಿಶ್ವರ್ ಜಿ ಮಹಾರಾಜ್ (1870-1954) ಜೈನ ಸಂತನಾಗಿ ಕಠಿಣ ಜೀವನವನ್ನು ನಡೆಸಿದ್ದು, ಜೈನರ ಐಕಾನ್ ಎಂದೇ ಖ್ಯಾತಿಯಾಗಿದ್ದಾರೆ. ಜನಸಾಮಾನ್ಯರ ಕಲ್ಯಾಣ, ಶಿಕ್ಷಣ ಹರಡುವಿಕೆ, ಸಾಮಾಜಿಕ ದುಷ್ಟರ ನಿರ್ಮೂಲನೆಗಾಗಿ ಪಟ್ಟುಹಿಡಿದು ಕೆಲಸ ಮಾಡಿದ್ದಾರೆ. (ಏಜೆನ್ಸೀಸ್)