ತಾನೂ ಮಾಡಲ್ಲ, ಪರರಿಗೂ ಬಿಡಲ್ಲ: ಪ್ರತಿಪಕ್ಷಗಳನ್ನು ತರಾಟೆ ತೆಗೆದುಕೊಂಡ ಮೋದಿ; 508 ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ

PM video conference
ವಿಡಿಯೋ ಕಾನ್ಫರೆನ್ಸ್​ನಲ್ಲಿ ಪ್ರಧಾನಿ ಮೋದಿ
Published on

ನವದೆಹಲಿ: ತಾನೂ ಕೆಲಸ ಮಾಡಲ್ಲ, ಇತರರಿಗೂ ಕೆಲಸ ಮಾಡಲು ಬಿಡಲ್ಲ ಎಂಬ ನೀತಿಯನ್ನು ವಿರೋಧಪಕ್ಷಗಳು ಅಳವಡಿಸಿಕೊಂಡಿದ್ದು, ಋಣಾತ್ಮಕ ರಾಜಕಾರಣ ಮಾಡುತ್ತಿವೆ ಎಂದು ಪ್ರದಾನಿ ನರೇಂದ್ರ ಮೋದಿ ತರಾಟೆ ತೆಗೆದುಕೊಂಡಿದ್ದಾರೆ.

ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, ನಾವು ಋಣಾತ್ಮಕ ರಾಜಕೀಯ ದಿಂದ ಮೇಲೆದ್ದು, ಅಭಿವೃದ್ಧಿಗೆ ಆದ್ಯತೆ ನೀಡಿ ಮಿಷನ್ ಮೋಡ್​ನಲ್ಲಿ ಸಕಾರಾತ್ಮಕ ರಾಜಕಾರಣದ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು. ಆಧುನಿಕ ಸಂಸತ್ ಭವನ ನಿರ್ವಿುಸಲಾಗಿದೆ. ಪ್ರತಿಪಕ್ಷಗಳು ಅದನ್ನು ವಿರೋಧಿಸುತ್ತಿವೆ. 70 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿದವರು ಹುತಾತ್ಮರಿಗೆ ಯುದ್ಧ ಸ್ಮಾರಕ ವನ್ನೂ ನಿರ್ವಿುಸ ಲಿಲ್ಲ. ನಾವು ಅದನ್ನು ನಿರ್ವಿುಸಿದೆವು. ಪ್ರತಿಪಕ್ಷಗಳಿಂದ ಅದಕ್ಕೂ ವಿರೋಧ ವ್ಯಕ್ತ. ಇದು ಪ್ರತಿಪಕ್ಷಗಳಿಗೆ ನಾಚಿಕೆಯ ಸಂಗತಿ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಈಗ ಇಡೀ ದೇಶವೇ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಓಲೈಕೆ ರಾಜಕಾರಣವನ್ನು ತೊಲಗಿಸಲು ಪಣತೊಟ್ಟಿದೆ. ವಿರೋಧ ಪಕ್ಷಗಳಿಗೆ ಇದು ನುಂಗಲಾರದ ತುತಾಗಿದೆ ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ವಿಶ್ವದ ಅತಿದೊಡ್ಡ ಪ್ರತಿಮೆಯಾಗಿದೆ. ಎಲ್ಲ ಭಾರತೀಯರು ಅದರ ಬಗ್ಗೆ ಹೆಮ್ಮೆಪಡುತ್ತಾರೆ. ಆದರೆ ಕೆಲವು ಪಕ್ಷಗಳು ಭಾರತದ ಪ್ರಪ್ರಥಮ ಗೃಹ ಸಚಿವರನ್ನು ಚುನಾವಣಾ ಸಮಯದಲ್ಲಿ ನೆನಪಿಸಿಕೊಳ್ಳುತ್ತಾರೆ. ಆದರೆ ಅವರ ನಾಯಕರು ಈ ಪ್ರತಿಮೆ ಬಳಿ ಹೋಗಲಿಲ್ಲ. ಗೌರವವನ್ನೂ ತೋರಿಸಿಲ್ಲ. ಹೀಗಾಗಿ ಪ್ರತಿಪಕ್ಷಗಳು ನಕಾರಾತ್ಮಕ ರಾಜಕಾರಣದಲ್ಲೇ ಮುಳುಗಿವೆ ಎಂದು ಮೋದಿ ಆರೋಪಿಸಿದರು.

ಅಮೃತ ಕಾಲದ ಆರಂಭ: ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತವು ಅಮೃತ ಕಾಲದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಪೂರ್ತಿ, ಹೊಸ ಸಂಕಲ್ಪ ಮತ್ತು ಉತ್ಸಾಹದ ನಡುವೆ ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

10 ಲಕ್ಷ ಯುವಕರಿಗೆ ಉದ್ಯೋಗ: ಪ್ರಸ್ತುತ ಕೇಂದ್ರ ಸರ್ಕಾರವು ಉದ್ಯೋಗ ಮೇಳ ಮೂಲಕ 10 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಅಭಿಯಾನ ಆರಂಭಿಸಿದೆ. ಇದು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ. ಅಭಿವೃದ್ಧಿಯು ಯುವಕರಿಗೆ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತಿದೆ. ಯುವಕರು ದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುತ್ತಿದ್ದಾರೆ ಎಂದು ಮೋದಿ ಹೇಳಿದರು. ಸರ್ಕಾರವು ತೆರಿಗೆ ಮೇಲಿನ ಜನರ ಗ್ರಹಿಕೆಯನ್ನು ಬದಲಾಯಿಸಿದೆ. ಹೆಚ್ಚುತ್ತಿರುವ ಸೌಲಭ್ಯಗಳು ಮತ್ತು ಜೀವನ ಸೌಕರ್ಯದಿಂದ ಪರಿಣಾಮ ತೆರಿಗೆ ಪಾವತಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ಮೊದಲು ದೇಶದಲ್ಲಿ 2 ಲಕ್ಷ ರೂಪಾಯಿ ವರೆಗೆ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಈಗ 7 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ಇಲ್ಲ. ಇದರ ಹೊರತಾಗಿಯೂ ದೇಶದಲ್ಲಿ ಸಂಗ್ರಹವಾಗುವ ಆದಾಯ ತೆರಿಗೆ ಪ್ರಮಾಣ ಹೆಚ್ಚುತ್ತಿದೆ. ದೇಶದಲ್ಲಿ ಮಧ್ಯಮ ವರ್ಗದವರ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಶೇ. 16 ಹೆಚ್ಚಾಗಿದೆ ಎಂದರು.

ಏನೇನು ಸೌಲಭ್ಯ?: 24,470 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಯಿಂದ ಪ್ರಯಾಣಿಕರಿಗೆ ಆಧುನಿಕ ಸೌಕರ್ಯಗಳು ಸಿಗಲಿವೆ. ಉತ್ತಮವಾಗಿ ವಿನ್ಯಾಸಗೊಳಿಸಲಾದ ಸುಗಮ ಸಂಚಾರ, ಇಂಟರ್-ಮಾಡಲ್ ಏಕೀಕರಣ ವ್ಯವಸ್ಥೆ, ಪ್ರಯಾಣಿಕರ ಮಾರ್ಗದರ್ಶನಕ್ಕಾಗಿ ಉತ್ತಮವಾಗಿ ವಿನ್ಯಾಸಗೊಳಿಸಲಾದ ಫಲಕಗಳು ನಿಲ್ದಾಣದಲ್ಲಿ ಇರಲಿವೆ. ಕಟ್ಟಡಗಳು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿರುತ್ತವೆ. ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸುವುದು ಯೋಜನೆಯ ಆದ್ಯತೆ ಆಗಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

ಅಮೃತ್ ಭಾರತ್: ದೇಶದಲ್ಲಿ 1,309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ‘ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯ ಮೊದಲ ಭಾಗವಾಗಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಭಾನುವಾರ ಅಡಿಪಾಯ ಹಾಕಿದ್ದಾರೆ.

ಕ್ವಿಟ್ ಇಂಡಿಯಾ: ಕ್ವಿಟ್ ಇಂಡಿಯಾ ಚಳವಳಿಯಿಂದ ಪ್ರೇರಿತವಾಗಿ ಇಡೀ ದೇಶ ಈಗ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಓಲೈಕೆ ರಾಜಕಾರಣವನ್ನು ಭಾರತ ಬಿಟ್ಟು ತೊಲಗಿಸಲು ಸಜ್ಜಾಗಿದೆ. ಇಂದು ಇಡೀ ವಿಶ್ವದ ಗಮನ ಭಾರತದತ್ತ ನೆಟ್ಟಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ. ಭಾರತದ ಬಗೆಗಿನ ವಿಶ್ವದ ದೃಷ್ಟಿಕೋನವೂ ಬದಲಾಗಿದೆ. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ಭಾರತೀಯರು ಸುಮಾರು ಮೂರು ದಶಕಗಳ ನಂತರ ಪೂರ್ಣ ಬಹುಮತದ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಎರಡನೆಯದಾಗಿ ಪೂರ್ಣ ಬಹುಮತದ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು, ದೇಶದ ಮುಂದಿರುವ ಸವಾಲುಗಳಿಗೆ ಶಾಶ್ವತ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸಿದೆ ಎಂದು ಮೋದಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net