

Modi Manipur Visit: ಪ್ರಧಾನಿ ನರೇಂದ್ರ ಮೋದಿ ನಾಳೆ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ, 2023 ರಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಜನಾಂಗೀಯ ಹಿಂಸಾಚಾರದ ನಂತರ ಇದು ಅವರ ಮೊದಲ ಪ್ರವಾಸವಾಗಿದೆ. ಎರಡು ವರ್ಷಗಳಿಗೂ ಹೆಚ್ಚು ಕಾಲ, ಸಂಘರ್ಷ ಪೀಡಿತ ಈಶಾನ್ಯ ಪ್ರದೇಶದ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಪರಿಶೀಲಿಸಲು ರಾಜ್ಯಕ್ಕೆ ಭೇಟಿ ನೀಡದಿದ್ದಕ್ಕಾಗಿ ಪ್ರತಿಪಕ್ಷಗಳು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಟೀಕೆ ನಡೆಸಿದ್ದವು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಣಿಪುರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್, ಪ್ರಧಾನಿ ಭೇಟಿಯನ್ನು ಖಚಿತಪಡಿಸಿದ್ದು, ಈ ಸಂದರ್ಭದಲ್ಲಿ ಮೋದಿ 8,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೊದಲು ಮಿಜೋರಾಂನಿಂದ ಚುರಚಂದ್‌ಪುರಕ್ಕೆ ಬಂದಿಳಿಯಲಿರುವ ನಮೋ, ನಂತರ ಇಂಫಾಲ್‌ಗೆ ತೆರಳಲಿದ್ದಾರೆ ಎಂದು ಅವರು ಹೇಳಿದರು.
ಮಣಿಪುರದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯ ಬದ್ಧತೆಗೆ ಅನುಗುಣವಾಗಿ, ಪ್ರಧಾನ ಮಂತ್ರಿಯವರು ಚುರಚಂದಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ, ಪ್ರಧಾನಿಯವರ ಮಣಿಪುರದ ಈ ಭೇಟಿಯು ರಾಜ್ಯದಲ್ಲಿ ಶಾಂತಿ, ಸಹಜತೆ ಮತ್ತು ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ ಎಂದರು. ಕಾರ್ಯಕ್ರಮಕ್ಕೆ ಸಿದ್ಧಪಡಿಸಿದ್ದ ಸ್ಥಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ಅಲಂಕಾರಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರು ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ 1,200 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟಿಸುವ ಮುನ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ:ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ
ಪ್ರಧಾನಿಯವರ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಣಿಪುರ ಬಹಳ ದಿನಗಳಿಂದ ಸಂಕಷ್ಟದಲ್ಲಿದೆ ಮತ್ತು ಪ್ರಧಾನಿ ಮೋದಿ ಈಗ ಆ ರಾಜ್ಯಕ್ಕೆ ಭೇಟಿ ನೀಡುವುದು ದೊಡ್ಡ ವಿಷಯವಲ್ಲ, ಈಗ ಮತದಾರರ ಕಳ್ಳತನ ಮುಖ್ಯ ವಿಷಯವಾಗಿದೆ ಎಂದರು.(ಏಜೆನ್ಸೀಸ್)