ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಮೊದಲು ಹನುಮಗಢಿಗೆ ಹೋಗಲು ಇದೆ ವಿಶೇಷ ಕಾರಣ

pm modi_adityanath
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಹುಅಪೇಕ್ಷಿತ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮುನ್ನ ಅಯೋಧ್ಯೆಯ ಹನುಮಾನಗಢಿಗೆ ಭೇಟಿ ನೀಡಲಿದ್ದಾರೆ. ಇದಕ್ಕೆ ವಿಶೇಷವಾದ ಕಾರಣ ಇದೆ ಎಂದು 10ನೇ ಶತಮಾನದ ಹನುಮ ಗುಡಿಯ ಅರ್ಚಕರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮುನ್ನ ಹನುಮಾನಗಢಿಯ ಆಂಜನೇಯ ಸ್ವಾಮಿ ದೇಗುಲದಲ್ಲಿ ಮೊದಲಿಗೆ ಪೂಜೆ ಸಲ್ಲಿಸಲಿದ್ದಾರೆ. ಇಲ್ಲಿಂದ ಅವರು ಶಿಲಾನ್ಯಾಸ ನೆರವೇರಿಸಲು ಮುಂದಾಗಲಿದ್ದಾರೆ.

ಹನುಮನಿಗೆ ಪೂಜೆ ಸಲ್ಲಿಸದೆ ಅಯೋಧ್ಯೆಯಲ್ಲಿ ಭಗವಾನ್​ ಶ್ರೀ ರಾಮನ ಯಾವುದೇ ಪೂಜಾ ಕೈಂಕರ್ಯಗಳು ಆರಂಭವಾಗುವುದಿಲ್ಲ. ಇದು ತಿಳಿದಿರುವ ಕಾರಣ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ ಅವರು ಮೊದಲಿಗೆ ಹನುಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳುತ್ತಾರೆ ಎಂದು ಅರ್ಚಕ ಮಧುವನ್​ ದಾಸ್​ ಅವರು ವಿವರಿಸಿದ್ದಾರೆ.

ಭಗವಾನ್​ ರಾಮನ ಪರಮಭಕ್ತನಾದ ಹನುಮನಿಗೆ ಪೂಜೆ ಸಲ್ಲಿಸದೆ, ಅಯೋಧ್ಯೆಯಲ್ಲಿ ಯಾವುದೇ ಕೆಲಸ ಆರಂಭವಾಗುವುದಿಲ್ಲ. ಹಾಗಾಗಿ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ ಇಲ್ಲಿ ಪೂಜೆ ಸಲ್ಲಿಸಿ, ದೇಗುಲ ನಿರ್ಮಾಣ ಕಾರ್ಯ ಸಾಂಗೋಪಾಂಗವಾಗಿ ಸಾಗಲಿ ಎಂದು ಪ್ರಾರ್ಥಿಸಲಿದ್ದಾರೆ. ಇದಕ್ಕಾಗಿ ಅವರಿಬ್ಬರೂ 7 ನಿಮಿಷಗಳ ಸಮಯ ನಿಗದಿಪಡಿಸಿಕೊಂಡಿರುವುದಾಗಿ ಹನುಮ ದೇವಾಲಯದ ಮುಖ್ಯ ಅರ್ಚಕ ಮಹಾಂತ ರಾಜು ದಾಸ್​ ತಿಳಿಸಿದ್ದಾರೆ.

ಯಾಜಕರು ವೇದಮಂತ್ರ ಘೋಷದೊಂದಿಗೆ ಪ್ರಧಾನಿ ಮೋದಿ ಅವರನ್ನು ಹನುಮಾನಗಢಿ ದೇಗುಲಕ್ಕೆ ಕರೆತರಲಿದ್ದಾರೆ. ಇಲ್ಲಿ ಕರೊನಾ ವೈರಾಣು ಸೋಂಕಿನಿಂದ ದೇಶವನ್ನು ಮುಕ್ತಗೊಳಿಸುವಂತೆ ಕೋರುವ ಜತೆಗೆ ದೇಗುಲ ನಿರ್ಮಾಣ ಕಾರ್ಯಗಳು ಅಡೆತಡೆಯಿಲ್ಲದೆ ಸಾಗಲಿ ಎಂದು ಪ್ರಧಾನಿ ಪ್ರಾರ್ಥಿಸಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಸಾದ ಕೊಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ ಅವರ ಭೇಟಿಯ ಸಂದರ್ಭದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ನಮ್ಮೆಲ್ಲರಿಗೂ ಸೂಚನೆ ಬಂದಿದೆ. ಆದ್ದರಿಂದ ಅವರಿಬ್ಬರನ್ನೂ ಯಾರೊಬ್ಬರೂ ಸ್ಪರ್ಶಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲ, ಅವರಿಗೆ ಪ್ರಸಾದವನ್ನೂ ಕೊಡುವುದಿಲ್ಲ ಎಂದು ಮಹಾಂತ ರಾಜು ದಾಸ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net