ಮುಂದಿನ ತಿಂಗಳು ಅಮೆರಿಕಕ್ಕೆ ಪ್ರಧಾನಿ; ಟ್ರಂಪ್ ಜತೆ ಮೋದಿ ಮಾತುಕತೆ! ಸುಂಕ ಸಮರಕ್ಕೆ ಬ್ರೇಕ್​? | PM Modi

ವಿಜಯವಾಣಿ (85)
Published on

PM Modi: ಭಾರತದ ಮೇಲೆ ಈ ಮೊದಲು ಶೇ.25ರಷ್ಟು ಸುಂಕ ವಿಧಿಸಿದ್ದಲ್ಲದೇ ಹೆಚ್ಚುವರಿ ಶೇ.50ರಷ್ಟು ಸುಂಕ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ರಷ್ಯಾ ಮೇಲಿನ ಕೋಪವನ್ನು ನಮ್ಮ ದೇಶದ ಮೇಲೆ ತೋರಿಸಿರುವುದು ಸ್ಪಷ್ಟ. ಇದೇ ಆಗಸ್ಟ್​ 15ರಂದು ಯುಎಸ್​ನ ಅಲಾಸ್ಕಾದಲ್ಲಿ ಟ್ರಂಪ್​ ಮತ್ತು ರಷ್ಯಾ ಅದ್ಯಕ್ಷ ವ್ಲಾಡಿಮಿರ್ ಪುಟಿನ್ ಮುಖಾಮುಖಿ ಭೇಟಿಯಾಗಲಿದ್ದಾರೆ. ಈ ವಿಷಯ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ, ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಭೇಟಿ ಕೊಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸುಂಕಗಳ ಕುರಿತು ಟ್ರಂಪ್ ಅವರೊಂದಿಗೆ ಮೋದಿ ಮುಖಾಮುಖಿ ಸಭೆ ನಡೆಸಲಿದ್ದಾರೆಯೇ? ಈ ಸುಂಕ ಸಮರಕ್ಕೆ ಶೀಘ್ರದಲ್ಲೇ ಅಂತ್ಯ ಹಾಡಲಿದ್ದಾರೆಯೇ? ಎಂಬ ನಿರೀಕ್ಷೆ ಇದೀಗ ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ, ಅಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ತಿಳಿಸಿವೆ.

ಈ ಮುಖಾಮುಖಿ ಸಭೆಯು ಸುಂಕದ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂಬ ಸೂಚನೆಗಳಿವೆ. ತೀವ್ರ ವ್ಯಾಪಾರ ಉದ್ವಿಗ್ನತೆಯ ನಡುವೆ, ಪ್ರಧಾನಿ ಮೋದಿ ಮುಂದಿನ ತಿಂಗಳು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ಟ್ರಂಪ್​ರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಇಬ್ಬರೂ ಇಲ್ಲಿ ಸುಂಕಗಳು ಮತ್ತು ವ್ಯಾಪಾರ ಸಂಬಂಧಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ಶುಕ್ರವಾರ, ರಷ್ಯಾದ ಅಧ್ಯಕ್ಷ ಪುಟಿನ್ ಅಲಾಸ್ಕಾದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ. ಅದೇ ರೀತಿ, ಪ್ರಧಾನಿ ಮೋದಿ ಈ ತಿಂಗಳ ಕೊನೆಯಲ್ಲಿ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಗಾಗಿ ಚೀನಾಕ್ಕೆ ತೆರಳಲಿದ್ದಾರೆ. ಇಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಮೋದಿ ಭೇಟಿಯಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಈ ಮಧ್ಯೆ ಪುಟಿನ್​ ಸಹ ಭಾರತಕ್ಕೆ ಆಗಮಿಸಬಹುದು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈಗಾಗಲೇ ಮಾಸ್ಕೋಗೆ ಭೇಟಿ ನೀಡಿ, ಒಂದಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net