

ನವದೆಹಲಿ: ಫುಡ್ ಆ್ಯಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ (ಎಫ್ಎಒ)ನ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವ ಆಹಾರ ದಿನವಾದ ಇಂದು ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ಅವರು ಜೈವಿಕ ದೃಢೀಕೃತವಾಗಿ ಅಭಿವೃದ್ಧಿಗೊಳಿಸಿದ ಎಂಟು ಬೆಳೆಗಳ ತಳಿಯನ್ನು ಲೋಕಾಪರ್ಣೆಗೊಳಿಸಿದರು.
ಎಂಟು ತಳಿಗಳ ವಿವರ:
ಭತ್ತ (ಸಿಆರ್ ಧನ್ 315)
ಗೋಧಿ (ಎಚ್ಐ 1633)
ಗೋಧಿ (ಡಿಬಿಡಬ್ಲ್ಯು 303, ಡಿಬಿಡಬ್ಲ್ಯು 48)
ಲಧೋವಲ್ ಕ್ವಾಲಿಟಿ ಪ್ರೊಟೀನ್ ಜೋಳ ಹೈಬ್ರಿಡ್ 1,2 ಮತ್ತು 3
ರಾಗಿ (ಸಿಎಫ್ಎಂವಿ 1 ಮತ್ತು 2)
ಸಾಮೆ (ಸಿಎಲ್ಎಂವಿ1)
ಸಾಸಿವೆ (ಪುಸಾ ಮಸ್ಟರ್ಡ್ 32 )
ಶೇಂಗಾ (ಗಿರ್ನರ್ 4 ಮತ್ತು 5)
ಸಿಹಿಗೆಣಸು (ಶ್ರೀನಿಲಿಮಾ ಮತ್ತು ಡಿಎ 340)
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಭಾರತ ಮತ್ತು ಎಫ್ಎಒ ನಡುವಿನ ಸಂಬಂಧವನ್ನು ಸ್ಮರಿಸಿಕೊಂಡರು. 1956-1967ರ ಅವಧಿಯಲ್ಲಿ ಎಫ್ಎಒದ ಡೈರೆಕ್ಟರ್ ಜನರಲ್ ಆಗಿದ್ದವರು ಭಾರತದ ನಾಗರಿಕ ಸೇವಾ ಅಧಿಕಾರಿ ಡಾ. ಬಿನಯ್ ರಂಜನ್ ಸೇನ್. ಅವರ ಅವಧಿಯಲ್ಲಿ ಸ್ಥಾಪಿಸಲ್ಪಟ್ಟ ವಿಶ್ವ ಆಹಾರ ಯೋಜನೆಗೆ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ಲಭ್ಯವಾಗಿದೆ. ಇದೊಂದು ಸಾಧನೆಯೇ ಸರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ಗೋಧಿ ಮತ್ತು ಅಕ್ಕಿಯ ಉತ್ಪಾದನೆಯಲ್ಲಿ ಭಾರತ ಎಲ್ಲ ದಾಖಲೆಗಳನ್ನೂ ಮುರಿದಿದೆ ಎಂದು ಹೇಳಿದರು. ಗರಿಷ್ಠ ಪೌಷ್ಟಿಕಾಂಶದ ದವಸ ಧಾನ್ಯಗಳನ್ನು ಬೆಳೆಯಲು ಸರ್ಕಾರ ಉತ್ತೇಜನ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಈಗ 17 ಜೈವಿಕ ದೃಢೀಕೃತ ತಳಿಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಅವರ ಭಾಷಣವನ್ನು ವೀಕ್ಷಿಸಲು ಮೇಲಿನ ವಿಡಿಯೋ ಕ್ಲಿಕ್ಕಿಸಬಹುದು.