ಅಜಾತಶತ್ರು ವಾಜಪೇಯಿ ಜನ್ಮ ವಾರ್ಷಿಕೋತ್ಸವ: ಸದೈವ್​ ಅಟಲ್​ ಸ್ಮಾರಕಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

PM Modi
Published on

ನವದೆಹಲಿ: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ 98ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಜಗದೀಪ್​ ಧನಕರ್​ ಸೇರಿದಂತೆ ಪ್ರಮುಖ ಗಣ್ಯರು ವಾಜಪೇಯಿ ಅವರಿಗೆ ಭಾನುವಾರ (ಡಿ.25) ಗೌರವ ನಮನ ಸಲ್ಲಿಸಿದರು.

ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದ ಬಳಿ ನಿರ್ಮಾಣ ಮಾಡಲಾಗಿರುವ ಸದೈವ್​ ಅಟಲ್​ ಸ್ಮಾರಕಕ್ಕೆ ತೆರಳಿದ ಗಣ್ಯರು ವಾಜಪೇಯಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಗೃಹ ಸಚಿವ ಅಮಿತ್​ ಷಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮತ್ತು ಹರ್ದಿಪ್​ ಸಿಂಗ್​ ಪುರಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಅಟಲ್ ಜಿ ಅವರ ಜಯಂತಿಯಂದು ಅವರಿಗೆ ನಮನಗಳು. ಭಾರತಕ್ಕೆ ಅವರ ಕೊಡುಗೆ ಅವಿಸ್ಮರಣೀಯ. ಅವರ ನಾಯಕತ್ವ ಮತ್ತು ದೃಷ್ಟಿ, ಲಕ್ಷಾಂತರ ಭಾರತೀಯರನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ. ಅವರ ಜೀವನದ ಕಿರುನೋಟದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಅವರು 2018 ಆಗಸ್ಟ್​ 16ರಂದು ದೆಹಲಿಯಲ್ಲಿ ಕೊನೆಯುಸಿರೆಳೆದರು. ಸಕಲ ಗೌರವಗಳೊಂದಿಗೆ ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅಲ್ಲದೆ, ದೇಶದ ಪ್ರಮುಖ ನದಿಗಳಲ್ಲಿ ವಾಜಪೇಯಿ ಅವರ ಚಿತಾಭಸ್ಮವನ್ನು ಬಿಡಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net