

ನವದೆಹಲಿ: ರಾಜ್ಯಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಅವರ ಚೊಚ್ಚಲ ಭಾಷಣವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸುಧಾ ಮೂರ್ತಿ ಅವರು ಮಹಿಳೆಯರ ಆರೋಗ್ಯದ ಕುರಿತು ಮಾತನಾಡಿದರು.
ತಾಯಿ ಸತ್ತರೆ ಆಸ್ಪತ್ರೆಯಲ್ಲಿ ಒಬ್ಬರ ಸಾವು ದಾಖಲಾಗುತ್ತದೆ. ಆದರೆ ಒಂದು ಕುಟುಂಬ ತಾಯಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ. ಹೀಗಾಗಿ ಮಹಿಳೆಯ ಆರೋಗ್ಯ ಅತ್ಯಂತ ಮುಖ್ಯʼ ಎಂದು ಹೇಳಿದರು.
ಒಂಬತ್ತರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡಲಾಗುವ ಗರ್ಭಕಂಠದ ಕ್ಯಾನ್ಸರ್ ಪ್ರತಿರೋಧ ಲಸಿಕೆ ಎಲ್ಲರಿಗೂ ಒದಗಿಸುವ ಅವಶ್ಯಕತೆ ಇದೆ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಲಸಿಕೆಯನ್ನು 20ವರ್ಷಗಳಿಂದ ಪಶ್ಚಿಮದ ದೇಶಗಳಲ್ಲಿ ಬಳಸಲಾಗುತ್ತಿದೆ. ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಇದರ ಬೆಲೆಯೂ ಕಡಿಮೆ. ಮುಕ್ತ ಮಾರುಕಟ್ಟೆಯಲ್ಲಿ 1400 ರೂ. ಇದೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದರೆ 700-800 ರೂ.ಗೆ ಸಿಗುತ್ತದೆ" ಎಂದು ಸುಧಾಮೂರ್ತಿ ಹೇಳಿದರು.
ತಾಯ್ತನದ ಕುರಿತು ಸುಧಾ ಮೂರ್ತಿ ಭಾವನಾತ್ಮಕ ಭಾಷಣ ಮಾಡಿದ್ದಾರೆ ಎಂದು ಮೋದಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ತರಲಾಗಿದ್ದು, ಇದರ ಅಂಗವಾಗಿ ಶೌಚಾಲಯ ನಿರ್ಮಾಣ, ಸ್ಯಾನಿಟರಿ ಪ್ಯಾಡ್, ಗರ್ಭಿಣಿಯರಿಗೆ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೋದಿ ಹೇಳಿದರು. ಆ ವೇಳೆ ಸುಧಾಮೂರ್ತಿ ಎದ್ದು ನಿಂತು ಪ್ರಧಾನಿಗೆ ನಮಿಸಿದರು.