ಹತ್ರಾಸ್​ ಕಾಲ್ತುಳಿತ ಪ್ರಕರಣದ ತನಿಖೆ ಚುರುಕು..ಎಫ್​ಐಆರ್​ ದಾಖಲಾಗುತ್ತಿದ್ದಂತೆ ಕಾಲ್ಕಿತ್ತ ಭೋಲೆ ಬಾಬಾ!

hatras
Published on

ಲಖನೌ: ಹತ್ರಾಸ್ ಕಾಲ್ತುಳಿತದ ದುರ್ಘಟನೆಯ ನಂತರ ಸಂಘಟಕರು ಪುರಾವೆಗಳನ್ನು ಮರೆಮಾಚಿದ್ದಾರೆ ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದ್ದು, ಸ್ವಯಂಘೋಷಿತ ದೇವಮಾನವ 'ಭೋಲೆ ಬಾಬಾ' ಪರಾರಿಯಾಗಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಆಯೋಜಿಸಿದ್ದ ಸತ್ಸಂಗದಲ್ಲಿ 121ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರಲ್ಲಿ 108 ಮಹಿಳೆಯರು ಮತ್ತು 7 ಮಕ್ಕಳು ಸೇರಿದ್ದಾರೆ. ಮಂಗಳವಾರ ಫುಲ್ರೈ ಗ್ರಾಮದ ಬಳಿ ಸ್ವಯಂಘೋಷಿತ ದೇವಮಾನವ ಬಾಬಾ ನಾರಾಯಣ್ ಸಕರ್ ಹರಿ ಅಕಾ ಭೋಲೆ ಬಾಬಾ ನಡೆಸಿದ ಸತ್ಸಂಗಕ್ಕಾಗಿ ಸಹಸ್ರಾರು ಮಂದಿ ಸೇರಿದ್ದರು. ಬಾಬಾ ಸ್ಥಳದಿಂದ ಹೊರಡುತ್ತಿದ್ದಂತೆಯೇ ನೆರೆದಿದ್ದ ಜನರು ಅವರ ಪಾದ ಸ್ಪರ್ಶಿಸಲು ಮುಂದಾದಾಗ ಈ ದುರ್ಘಘಟನೆ ನಡೆದಿತ್ತು.

ಹತ್ರಾಸ್ ದುರಂತ: ಬಾಬಾ ಸ್ಥಳದಿಂದ ಹೊರಡುತ್ತಿದ್ದಂತೆಯೇ ನೆರೆದಿದ್ದ ಜನ ಬಾಬಾ ಅವರ ಪಾದ ಸ್ಪರ್ಶಿಸಲು ಮುಂದಾದಾಗ ಈ ಘೋರ ದುರಂತ ನಡೆದಿದೆ.

ಇದರ ನಡುವೆ ಉತ್ತರ ಪ್ರದೇಶ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಬಾಬಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆಶಿಶ್ ಕುಮಾರ್, ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಉಪವಿಭಾಗಾಧಿಕಾರಿ ಅನುಮತಿ ನೀಡಿದ್ದರು. ಸ್ಥಳದ ಹೊರಗೆ ಸ್ಥಳೀಯ ಆಡಳಿತವು ಭದ್ರತೆ ಒದಗಿಸಿದೆ. ಆದರೆ ಒಳಗಿನ ವ್ಯವಸ್ಥೆಯನ್ನು ಆಯೋಜಕರು ನೋಡಿಕೊಳ್ಳಬೇಕಿತ್ತು ಎಂದು ಹೇಳಿದರು.

ಇನ್ನು ಸರ್ಕಾರದಿಂದ 80ಸಾವಿರ ಜನರು ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ 2.5 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಕಾಲ್ತುಳಿತದ ಬಳಿಕ ಸಂಘಟಕರು ಸಾಕ್ಷ್ಯವನ್ನು ನಾಶಪಡಿಸಿದ್ದಾರೆ. ಜನರು ತೊಂದರೆಗೊಳಗಾದಾಗ ಸಂಘಟಕರು ಯಾವುದೇ ಸಹಾಯವನ್ನು ನೀಡಲಿಲ್ಲ ಎಂದು ಎಫ್‌ಐಆರ್ ನಲ್ಲಿ ಆರೋಪಿಸಿದೆ.

ದೇವಪ್ರಕಾಶ್ ಮಧುಕರ್ ಅಕಾ 'ಮುಖ್ಯ ಸೇವಾದಾರ್' ಮತ್ತು ಕಾರ್ಯಕ್ರಮದ ಇತರ ಸಂಘಟಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023 ರ ಸೆಕ್ಷನ್ 105, 110, 126 (2), 223 ಮತ್ತು 238 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಭೋಲೆ ಬಾಬಾ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net