'ಹೊಸ ತಂತ್ರಜ್ಞಾನದ ಬಗ್ಗೆ ಇರಲಿ ಎಚ್ಚರ'! ಡೀಪ್‌ಫೇಕ್ ಕುರಿತಂತೆ ಪ್ರಧಾನಿ ಹೇಳಿದ್ದಿಷ್ಟು

ವಿಜಯವಾಣಿ - 2023-12-20T111335.564
Published on

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಡೀಪ್‌ಫೇಕ್‌ಗಳ ವಿಷಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದು, ಇದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಜನಸಾಮಾನ್ಯರಿಗೆ ಎಚ್ಚರಿಸಿದ್ದಾರೆ. 'ಎಐ'ನಿಂದ ರಚಿತವಾದ ವೀಡಿಯೊಗಳು ಮತ್ತು ಚಿತ್ರಗಳು ನೈಜ ಎಂಬಂತೆ ಕಾಣುತ್ತವೆ ಎಂದ ಪ್ರಧಾನಿ, ಹೊಸ ತಂತ್ರಜ್ಞಾನದ ಬಗ್ಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದ ಪ್ರಧಾನಿ ಮೋದಿ, ಹೊಸ ತಂತ್ರಜ್ಞಾನಗಳನ್ನು ಬಳಸುವಾಗ ಬಹಳ ಎಚ್ಚರ ವಹಿಸಿ ಎಂದು ಪ್ರತ್ಯೇಕವಾಗಿ ಒತ್ತಿ ಹೇಳಿದರು. "ನಾವು ಹೊಸ ತಂತ್ರಜ್ಞಾನದೊಂದಿಗೆ ಜಾಗರೂಕರಾಗಿರಬೇಕು. ಇವುಗಳನ್ನು ಎಚ್ಚರಿಕೆಯಿಂದ ಬಳಸಿದರೆ, ಅವು ತುಂಬಾ ಉಪಯುಕ್ತವಾಗಬಹುದು. ಆದಾಗ್ಯೂ, ಇವುಗಳನ್ನು ದುರುಪಯೋಗಪಡಿಸಿಕೊಂಡರೆ, ದೊಡ್ಡ ಸಮಸ್ಯೆಗಳು ಎದುರಾಗಬಹುದು" ಎಂದರು.

"ನೀವು ಜನರೇಟಿವ್ ಎಐ (AI) ಸಹಾಯದಿಂದ ಮಾಡಿದ ಡೀಪ್‌ಫೇಕ್ ವೀಡಿಯೊಗಳ ಬಗ್ಗೆ ತಿಳಿದಿರಬೇಕು. ಈ ದೃಶ್ಯಗಳು ತುಂಬಾ ನೈಜವಾಗಿ ಕಾಣುತ್ತವೆ. ಆದ್ದರಿಂದ ವೀಡಿಯೊ ಅಥವಾ ಚಿತ್ರದ ಸತ್ಯಾಸತ್ಯತೆಯನ್ನು ನಂಬುವ ಮೊದಲು ನಾವು ಬಹಳ ಜಾಗರೂಕತೆ ವಹಿಸಬೇಕು" ಎಂದು ಪ್ರಧಾನಿ ಹೇಳಿದರು.

ಕಳೆದ ತಿಂಗಳು ನಟಿಯರಾದ ರಶ್ಮಿಕಾ ಮಂದಣ್ಣ, ಕಾಜೋಲ್ ಸೇರಿದಂತೆ ಹಲವು ಬಾಲಿವುಡ್ ಕಲಾವಿದರ ಡೀಪ್‌ಫೇಕ್ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಸುದ್ದಿಗಳು ಜನಸಾಮಾನ್ಯರಲ್ಲಿ ಭಾರೀ ಆತಂಕವನ್ನು ಸೃಷ್ಟಿಸಿತ್ತು!,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net