

ಗಾಂಧಿನಗರ: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಇಂದು ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಪ್ರಧಾನಿ ಮೋದಿ ಕೂಡ ಅಯೋಧ್ಯೆಗೆ ತೆರಳಿದ್ದಾರೆ. ಮೋದಿ ಹಾಗೂ ಅವರ ತಾಯಿಯ ಬಾಂಧವ್ಯ ಯಾರಿಗೆ ಗೊತ್ತಿಲ್ಲ?. ಇದೀಗ ಮೋದಿಯವರ ತಾಯಿ ವಾಸಿಸುತ್ತಿದ್ದ ಮನೆಯನ್ನು ಚೆನ್ನಾಗಿ ಅಲಂಕರಿಸಲಾಗಿದೆ. ಮೋದಿಯವರ ತಾಯಿ ತಮ್ಮ ಮಗ ಪಂಕಜ್ ಮೋದಿಯವರ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಈ ಮನೆಯನ್ನೇ ಅಲಂಕರಿಸಲಾಗುತ್ತಿದೆ. ಹೌದು, ಮೋದಿಯವರ ತಾಯಿಯ ಕೋಣೆಯನ್ನು ಅಲಂಕರಿಸಿರುವ ವಿಡಿಯೋ ಕೂಡ ಹೊರಬಿದ್ದಿದ್ದು, ಮೋದಿ ಅವರ ಮಗ ಮತ್ತು ಸೊಸೆ ಈ ಕೊಠಡಿಯನ್ನು ಅಲಂಕರಿಸುತ್ತಿದ್ದಾರೆ.
ಗಾಂಧಿನಗರದಲ್ಲಿರುವ ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಅವರ ಮನೆಯ ಅಲಂಕಾರದ ವಿಡಿಯೋ ಔಟ್ ಆಗಿದ್ದು, ಮೋದಿಯವರ ತಾಯಿಯೂ ಇಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ವಿಡಿಯೋದಲ್ಲಿ ಪಂಕಜ್ ಮೋದಿ ಅವರ ಪುತ್ರ ಸಚಿನ್ ಕೊಳಲು ನುಡಿಸುತ್ತಿದ್ದರೆ, ಸೊಸೆ ಉನ್ನತಿ ರಂಗೋಲಿ ಹಾಕುವುದನ್ನು ಕಾಣಬಹುದು. ಸಚಿನ್ 'ಮೇರಿ ಜೋಪ್ಡಿ ಕೆ...' ಟ್ಯೂನ್ ನುಡಿಸುತ್ತಿರುವಾಗ ಅವರ ಪತ್ನಿ ಉನ್ನತಿ ಮನೆಯನ್ನು ರಂಗೋಲಿಯಿಂದ ಅಲಂಕರಿಸುತ್ತಿದ್ದಾರೆ. ಮನೆಯಲ್ಲಿರುವ ಗಿಡಗಳಿಗೂ ಅಲಂಕಾರ ಮಾಡಲಾಗಿದೆ. ರಂಗೋಲಿಯ ಜೊತೆಗೆ ಮನೆಯನ್ನು ಹೂವಿನಿಂದ ಅಲಂಕರಿಸಲಾಗಿದೆ.
ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಡೀ ದೇಶ ಉತ್ಸಾಹದಿಂದ ಭಾಗವಹಿಸಿದೆ. ದೇಶದ ಮೂಲೆ ಮೂಲೆಗಳಲ್ಲಿ ಹಿಂದೂ ಸಂಘಟನೆಗಳಿಂದ ಭಕ್ತಿ ಕಾರ್ಯಕ್ರಮಗಳು, ಮೆರವಣಿಗೆಗಳು ನಡೆಯುತ್ತಿವೆ. ಇಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಅಯೋಧ್ಯೆ ನಗರವನ್ನೂ ಸಂಪೂರ್ಣ ಅಲಂಕರಿಸಲಾಗಿದೆ. ಅಯೋಧ್ಯೆಗೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಹಲವು ವಿಶೇಷ ಅತಿಥಿಗಳು ಆಗಮಿಸುತ್ತಿದ್ದಾರೆ. ಇಂದು ರಾಮಲಲ್ಲಾ ಪ್ರತಿಷ್ಠಾಪನೆ ಸಂದರ್ಭದಲ್ಲಿ ಇಡೀ ದೇಶದ ಕಣ್ಣು ಅಯೋಧ್ಯೆಯತ್ತ ನೆಟ್ಟಿದೆ.