

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಬಂದು ಶಂಕುಸ್ಥಾಪನೆ ನೆರವೇರಿಸಿದ ಬಳಿಕವಷ್ಟೇ ಶ್ರೀ ರಾಮ ದೇಗುಲ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಶ್ರೀ ರಾಮಜನ್ಮಭೂಮಿ ತೀರ್ಥ್ ಕ್ಷೇತ್ರ್ ಟ್ರಸ್ಟ್ನ ಮಹಾಂತಾ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ.
ದೇಗುಲ ನಿರ್ಮಾಣ ಕಾಮಗಾರಿ ಕುರಿತು ಚರ್ಚಿಸಲು ಟ್ರಸ್ಟ್ನ ಸದಸ್ಯರು ಜುಲೈ 18ರಂದು ಸಭೆ ಸೇರಲಿದ್ದಾರೆ. ಆಯೋಧ್ಯೆಗೆ ಬಂದು ಶಂಕುಸ್ಥಾಪನೆ ನೆರವೇರಿಸುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಈಗಾಗಲೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಅವರಿಂದ ಉತ್ತರವನ್ನು ನಿರೀಕ್ಷಿಸಲಾಗುತ್ತಿದೆ ಎಂದರು.
ಅವರು ಇಲ್ಲಿಗೆ ಬಂದರೆ ಸಾಕು. ಕೋವಿಡ್ ಪಿಡುಗಿನ ಹಿನ್ನೆಲೆಯಲ್ಲಿ ಜನರ ನೂಕುನುಗ್ಗಲು ಉಂಟಾಗದಂತೆ, ಅವರೆಲ್ಲರೂ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ನಾವು ಎಚ್ಚರವಹಿಸುತ್ತೇವೆ ಎಂದು ಹೇಳಿದರು.
ಕಳೆವ ವರ್ಷದ ನವೆಂಬರ್ 9ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಟ್ರಸ್ಟ್ ರಚಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿಯಲ್ಲಿ ತಾತ್ಕಾಲಿಕ ಟೆಂಟ್ನಲ್ಲಿದ್ದ ಶ್ರೀ ರಾಮಚಂದ್ರ ಮೂರ್ತಿಯನ್ನು ಮಾನಸ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಿ, ದೇಗುಲ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.