ಪ್ರತಿಯೊಬ್ಬ ನಾಗರಿಕನಿಗೂ ಕರೊನಾ ಲಸಿಕೆ ತಲುಪಿಸುವುದು ನಮ್ಮ ರಾಷ್ಟ್ರೀಯ ಬದ್ಧತೆ: ಪ್ರಧಾನಿ ಮೋದಿ

PM modi
Published on

ನವದೆಹಲಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಂಟಿ ಪ್ರಯತ್ನಗಳ ಫಲವಾಗಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತವಿಂದು ಕರೊನಾ ಚೇತರಿಕೆ ಮತ್ತು ಮರಣ ಪ್ರಮಾಣದಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ವಿವಿಧ ರಾಜ್ಯದ ಮುಖ್ಯಮಂತ್ರಿಗಳ ಜತೆ ವರ್ಚುವಲ್​ ಸಭೆ ನಡೆಸಿದ ಬಳಿಕ ಪ್ರಧಾನಿ ಮೋದಿ ಮಾತನಾಡಿದರು. ಆಮ್ಲಜನಕ ಮತ್ತು ವೆಂಟಿಲೇಟರ್​ ಸಕಾಲಕ್ಕೆ ದೊರೆಯುವಲ್ಲಿ ಹೆಚ್ಚಿನ ಗಮನವಹಿಸಲಾಗಿದೆ. ಆಮ್ಲಜನಕ ವಿಚಾರದಲ್ಲಿ ಮೆಡಿಕಲ್​ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳು ಸ್ವಾವಲಂಬಿಯನ್ನಾಗಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದಲ್ಲಿ ಸುಮಾರು 160 ಆಕ್ಸಿಜನ್​ ಜನರೇಷನ್​ ಪ್ಲ್ಯಾನ್​ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಚೇತರಿಕೆ ಪ್ರಮಾಣ ಉತ್ತಮ ಆಗಿರುವುದನ್ನು ನೋಡಿ ಅನೇಕರು ವೈರಸ್​ ದುರ್ಬಲ ಆಗಿದೆ. ಬೇಗ ಗುಣಮುಖರಾಗುತ್ತೇವೆ ಅಂದುಕೊಂಡಿದ್ದಾರೆ. ಇದು ನಿರ್ಲಕ್ಷ್ಯಕ್ಕೆ ಎಡೆಮಾಡಿಕೊಡುತ್ತದೆ. ಲಸಿಕೆ ತಯಾರಿಸುತ್ತಿರುವವರು ಅವರ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಆದರೆ, ನಾವು ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಮತ್ತು ವೈರಸ್​ ಹರಡುವುದನ್ನು ತಡೆಗಟ್ಟಬೇಕಿದೆ. ಪಾಸಿಟಿವ್​ ಪ್ರಕರಣಗಳನ್ನು ಶೇ. 5ಕ್ಕಿಂತ ಕೆಳಗೆ ತರಬೇಕಿದೆ ಎಂದು ಸಲಹೆ ನೀಡಿದರು.

ಸುರಕ್ಷತೆ ಎಂಬುದೇ ಸದ್ಯ ನಮಗಿರುವ ಪ್ರಮುಖವಾದ ವೇಗ. ಭಾರತವೂ ಯಾವುದೇ ಲಸಿಕೆಯನ್ನು ತನ್ನ ನಾಗರಿಕರಿಗೆ ನೀಡಲಿ ಅದು ವೈಜ್ಞಾನಿಕ ಮಾನದಂಡಗಳೊಂದಿಗೆ ತುಂಬಾ ಸುರಕ್ಷಿತವಾಗಿರಲಿದೆ. ರಾಜ್ಯಗಳೊಂದಿಗಿನ ಸಾಮೂಹಿಕ ಸಮನ್ವಯದೊಂದಿಗೆ ಲಸಿಕೆ ವಿತರಣಾ ಕಾರ್ಯತಂತ್ರ ನಡೆಯಲಿದೆ. ಕೋಲ್ಡ್​ ಸ್ಟೋರೇಜ್​ ವ್ಯವಸ್ಥೆ ಬಗ್ಗೆ ರಾಜ್ಯಗಳು ಸಹ ಕೆಲಸ ಮಾಡಲು ಆರಂಭಿಸಬೇಕೆಂದು ತಿಳಿಸಿದರು.

ಲಸಿಕೆ ಅಭಿವೃದ್ಧಿ ಕುರಿತಾದ ಪ್ರತಿ ಬೆಳವಣಿಗೆಯನ್ನು ಭಾರತ ಸರ್ಕಾರ ಗಮನಿಸುತ್ತಿದೆ. ಭಾರತದ ಲಸಿಕ ಅಭಿವೃದ್ಧಿಪಡಿಸುವವರು ಮತ್ತು ತಯಾರಕರ ಜತೆ ಸಂಪರ್ಕದಲ್ಲಿದ್ದೇವೆ. ಜಾಗತಿಕ ನಿಯಂತ್ರಕರು, ಇತರೆ ದೇಶದ ಸರ್ಕಾರಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಕಂಪನಿಗಳ ಜತೆಯಲ್ಲೂ ಸಂಪರ್ಕದಲ್ಲಿದ್ದೇವೆ.

ಲಸಿಕೆ ನೀಡುವ ಪ್ರಮಾಣದ ಬಗ್ಗೆ ಖಚಿತವಾಗಿಲ್ಲ. ಅದರ ಬೆಲೆಯ ಬಗ್ಗೆಯೂ ನಿರ್ಧಾರವಾಗಿಲ್ಲ. ಈ ಪ್ರಶ್ನೆಗಳಿಗೆ ಇದುವರೆಗೂ ನಮ್ಮ ಬಳಿ ಉತ್ತರವಿಲ್ಲ. ಆದರೆ, ಪ್ರತಿಯೊಬ್ಬ ನಾಗರಿಕನಿಗೆ ಕರೊನಾ ಲಸಿಕೆ ತಲುಪಿಸುವುದು ರಾಷ್ಟ್ರೀಯ ಬದ್ಧತೆಯಾಗಿದೆ. ಪ್ರತಿ ರಾಜ್ಯ ಹಾಗೂ ಅದರ ಪಾಲುದಾರರು ಒಂದು ತಂಡವಾಗಿ ವ್ಯವಸ್ಥಿತವಾಗಿ ಲಸಿಕೆ ವಿತರಣೆ ಮಾಡಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net