ಜಮ್ಮುವಿನಲ್ಲಿ 32,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಚಾಲನೆ

modi
Published on

ಜಮ್ಮು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಜಮ್ಮುವಿನಲ್ಲಿ ಮೊದಲ ಎಲೆಕ್ಟ್ರಿಕಲ್​ ರೈಲು ಮತ್ತು ಸಂಗಲ್ದನ್​ ನಿಲ್ದಾಣ ಮತ್ತು ಬಾರಾಮುಲ್ಲಾ ನಿಲ್ದಾಣದ ನಡುವಿನ ರೈಲು ಸೇವೆಗೆ ಚಾಲನೆ ನೀಡಿದರು. ಮೋದಿ ಅವರು ‘ವಿಕಸಿತ್ ಭಾರತ್ ವಿಕಸಿತ್ ಜಮ್ಮು’ ಎಂಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರೊಂದಿದೆ ಸಂವಾದ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಕ್ಕೂ ಹೆಚ್ಚು ಹೊಸ ಸರ್ಕಾರಿ ನೇಮಕಾತಿ ಆದೇಶಗಳನ್ನು ವಿತರಿಸಿದರು.

ಜಮ್ಮು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹ ಮತ್ತು ಕೇಂದ್ರ ಸಚಿವ ಜೀತೇಂದ್ರ ಸಿಂಗ್​ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಪ್ರಧಾನಿ ಚಾಲನೆ ನೀಡಿದ ಯೋಜನೆಗಳಿಗೆ ಅವರು ಕೂಡ ಸಾಕ್ಷಿಯಾಗಿದರು. ನರೇಂದ್ರ ಮೋದಿ ಅವರು ಇಂದು ಜಮ್ಮುವಿಗೆ ಭೇಟಿ ನೀಡಿದ್ದು, ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಅವರು ಎರಡನೇ ಭಾರಿ ಜಮ್ಮುವಿಗೆ ಬರುತ್ತಿದ್ದಾರೆ. ಪ್ರಮುಖವಾಗಿ ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಇಲ್ಲಿಗೆ ಬಂದಿರುವುದು ಮಹತ್ವದ್ದಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಹಿಂದಿನ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಿಎಂ ಮೋದಿ ಅವರ ಮೊದಲ ಸಲ ಜಮ್ಮು ಮತ್ತು ಕಾಶ್ಮೀರದ ಭೇಟಿ ಇದಾಗಿದೆ.

ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯನ್ನು ಭಾರತ ಇಡುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರು ಸುಮಾರು 13,375 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಎಸ್‌ಇಆರ್ ತಿರುಪತಿ, ಐಐಐಟಿಡಿಎಂ ಕರ್ನೂಲ್‌ನ ಶಾಶ್ವತ ಕ್ಯಾಂಪಸ್‌ಗಳನ್ನು ದೇಶಕ್ಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net