

ನವದೆಹಲಿ: ಪ್ರತಿಪಕ್ಷಗಳ ಒಕ್ಕೂಟದ ಬಗ್ಗೆ ಮತ್ತೆ ವಾಗ್ದಾಳಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯಾಗೆ ‘ಘಮಂಡಿಯಾ’ (ಸೊಕ್ಕು) ಎಂಬ ಹೊಸ ಹೆಸರನ್ನಿಟ್ಟು ಮೂದಲಿಸಿದ್ದಾರೆ. ಇಂಡಿಯಾ ಎಂದು ಹೆಸರು ಬದಲಿಸಿಕೊಂಡ ಮಾತ್ರಕ್ಕೆ ಬಡವರ ವಿರುದ್ಧ ಸಂಚು ರೂಪಿಸಿದ್ದನ್ನು ಮರೆಮಾಚಿ ದೇಶಪ್ರೇಮ ವ್ಯಕ್ತಪಡಿಸಲಾಗದು. ಹೆಸರು ಬದಲಾದ ಈ ಒಕ್ಕೂಟ ರೂಪಿತವಾಗಿದ್ದೇ ದೇಶವನ್ನು ಇನ್ನಷ್ಟು ಕೊಳ್ಳೆಹೊಡೆಯಲು ಎಂದು ವಾಗ್ದಾಳಿ ಮಾಡಿದ್ದಾರೆ.
ಬಿಹಾರದಲ್ಲಿ ಜೆಡಿಯು ಕಡಿಮೆ ಸ್ಥಾನಹೊಂದಿದ್ದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಎನ್ಡಿಎ ಮಾಡಿದ ತ್ಯಾಗವನ್ನು ಮತ್ತು ಹುದ್ದೆಯ ಘನತೆಯನ್ನು ಅವರು ಉಳಿಸಿಕೊಳ್ಳಲಿಲ್ಲ. ಸ್ವಾರ್ಥ ರಾಜಕಾರಣ ಮಾಡಿದರು. ಇದೇ ರೀತಿಯ ಸ್ವಾರ್ಥ ರಾಜಕಾರಣವನ್ನು ಅಕಾಲಿ ದಳ ಕೂಡ ಈ ಹಿಂದೆ ಮಾಡಿತ್ತು ಎಂದು ಮೋದಿ ಆಪಾದಿಸಿದರು.
‘ಇಂಡಿಯಾ’ವನ್ನು ಭಾರತ ವಿರೋಧಿ ಸಂಘಟನೆಗಳಾದ ಪಿಎಫ್ಐ, ಐಎಂ ಮತ್ತು ಈಸ್ಟ್ ಇಂಡಿಯಾ ಕಂಪನಿಗಳಿಗೆ ಪ್ರಧಾನಿ ಮೋದಿ ಈ ಹಿಂದೆ ಹೋಲಿಸಿದ್ದರು. ಎನ್ಡಿಎ ಸಂಸದರ ಸಭೆಯಲ್ಲಿ ’ಇಂಡಿಯಾ’ ವಿರುದ್ಧ ಹೋರಾಡಲು ನಾಯಕರು ಜಾತಿ ಆಧಾರಿತ ರಾಜಕೀಯದಿಂದ ಹೊರಬಂದು ಇಡೀ ಸಮಾಜದ ನಾಯಕರಾಗಬೇಕು ಎಂದು ಮೋದಿ ಕರೆ ನೀಡಿದ್ದರು. ಜುಲೈ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಸಭೆ ನಡೆಸಿ, ’ಇಂಡಿಯಾ’ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಒಳಗೊಳ್ಳುವಿಕೆಯ ಒಕ್ಕೂಟ) ಎಂಬ ಹೊಸ ಹೆಸರನ್ನು ತಮ್ಮ ಒಕ್ಕೂಟಕ್ಕೆ ಇರಿಸಿಕೊಂಡಿದ್ದವು. ಪ್ರಧಾನಿ ಮತ್ತು ಮೋದಿ ವಿರುದ್ಧ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹೋರಾಡುವುದಕ್ಕೆ ಈ ಹೆಸರು ಸಾಂಕೇತವಾಗಿದೆ ಎಂದು ಹೇಳಿವೆ.
ಪ್ರತಿಪಕ್ಷಗಳ ಮೈತ್ರಿವೇದಿಕೆಗೆ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಒಳಗೊಳ್ಳುವಿಕೆ ಒಕ್ಕೂಟ) ಸಂಕ್ಷಿಪ್ತವಾಗಿ ಇಂಡಿಯಾ ಎಂದು ನಾಮಕರಣ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ. ಸಂಬಂಧಿತರ ಪ್ರತಿಕ್ರಿಯೆಯನ್ನು ಕೇಳದೆ ಈ ವಿಷಯದಲ್ಲಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸತೀಶ್ಚಂದ್ರ ಶರ್ಮಾ ಮತ್ತು ಅಮಿತ್ ಮಹಾಜನ್ ಅವರ ಪೀಠ ಹೇಳಿದೆ. ಇಂಡಿಯಾ ವಿರುದ್ಧ ಗಿರೀಶ್ ಭಾರದ್ವಾಜ್ ಅರ್ಜಿ ಸಲ್ಲಿಸಿದ್ದು, ರಾಷ್ಟ್ರ ಧ್ವಜ ಮತ್ತು ಲಾಂಛನ ಕುರಿತ ಕಾನೂನಿಗೆ ಇದು ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. ಸಂಬಂಧಿತರ ಪ್ರತಿಕ್ರಿಯೆ ಕೇಳದೆ ಮಧ್ಯಂತರ ಆದೇಶ ಕೋರಿಕೆ ಪರಿಗಣಿಸಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನವದೆಹಲಿ: ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಗೆ ಆ. 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15 ಮತ್ತು ಕರ್ನಾಟಕದ 13 ರೈಲ್ವೆ ನಿಲ್ದಾಣಗಳು ಇದರಲ್ಲಿ ಸೇರಿವೆ. 24,470 ಕೋಟಿ ರೂ. ವೆಚ್ಚದ ಈ ಯೋಜನೆ ಅಡಿ ಪ್ರಯಾಣಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಉತ್ತಮ ವಿನ್ಯಾಸ, ಸುಗಮ ಸಂಚಾರದ ಗುರಿಯನ್ನು ಹೊಂದಲಾಗಿದೆ. ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪ ಆಧಾರದಲ್ಲಿ ನಿಲ್ದಾಣದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು. ದೇಶದ 1,309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ‘ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಪ್ರಾರಂಭಿಸಲಾಗಿದೆ. ಈ ಯೋಜನೆಯ ಭಾಗವಾಗಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಮೊದಲ ಹಂತದಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.