IPL 2024; RCB ತಂಡದ ಮುಖ್ಯ ಕೋಚ್​ ಆಗಿ ಆ್ಯಂಡಿ ಪ್ಲವರ್​ ನೇಮಕ

Andy Flower
Published on

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​​(IPL)ನ ಫ್ರಾಂಚೈಸಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ(RCB) ನೂತನ ಕೋಚ್​ ಆಗಿ ಜಿಂಬಾಬ್ವೆ ಮೂಲದ ಆ್ಯಂಡಿ ಪ್ಲವರ್​ರನ್ನು ಆಡಳಿತ ಮಂಡಳಿ ನೇಮಿಸಿದೆ.

ಈ ಹಿಂದೆ ತಂಡದ ಮುಖ್ಯ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದ ಸಂಜಯ್​ ಬಂಗಾರ್​ ಹಾಗೂ ಕಾರ್ಯಾಚರಣೆ ನಿರ್ದೇಶಕ ಮೈಕ್​ ಹೆಸ್ಸೆನ್​ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಆರ್​ಸಿಬಿ ಮ್ಯಾನೇಜ್​ಮೆಂಟ್​ ನವೀಕರಿಸದ ಕಾರಣ ಈ ಹೊಸ ತೀರ್ಮಾನವನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಉತ್ಸುಕರಾಗಿದ್ದೇವೆ

ಈ ಕುರಿತು ಟ್ವೀಟ್​ ಮಾಡಿರುವ ಆರ್​ಸಿಬಿ ಆ್ಯಂಡಿ ಪ್ಲವರ್​ ಅವರನ್ನು ಪುರುಷರ ತಂಡದ ಮುಖ್ಯ ಕೋಚ್​ ಹುದ್ದೆಗೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಐಸಿಸಿ ಹಾಲ್​ ಆಫ್​ ಫೇಮ್​, ಟಿ-20 ವಿಶ್ವಕಪ್​ ವಿಜೇತ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿರುವ ಆ್ಯಂಡಿ ಪ್ಲವರ್​ ಅವರು PSL, ILT20, ದಿ ಹಂಡ್ರೆಡ್ ಮತ್ತು ಅಬುಧಾಬಿ T10ನಲ್ಲಿ ತರಬೇತುಗಾರರಾಗಿ ಕಾರ್ಯನಿರ್ವಹಿಸಿ ತಂಡಗಳು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆರ್​ಸಿಬಿ ಪುರುಷರ ತಂಡದ ನೂತನ ಕೋಚ್​ ಆಗಿ ನೇಮಕಗೊಂಡ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಆ್ಯಂಡಿ ಪ್ಲವರ್​ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ಧಾರೆ.

ಸವಾಲನ್ನು ಎದುರು ನೋಡುತ್ತಿದ್ದೇನೆ

ನಾನು ಗೌರವಿಸುವ ಇಬ್ಬರು ಕೋಚ್​ಗಳಾದ ಸಂಜಯ್​ ಬಂಗಾರ್​ ಹಾಗೂ ಮೈಕ್​ ಹೆಸ್ಸೆನ್​ ಅವರ ಕಾರ್ಯವೈಖರಿಯನ್ನು ನೋಡಿದ್ಧೇನೆ. ಆರ್​ಸಿಬಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಹೊಸ ಸವಾಲನ್ನು ಎದುರು ನೋಡುತ್ತಿದ್ದೇನೆ. ಆರ್​ಸಿಬಿ ತಂಡಕ್ಕೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ.

ನಾಯಕ ಫಾಪ್​ ಡು ಪ್ಲೆಸಿಸ್​ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಮುಂದೆ ನಮ್ಮ ಸಂಬಂಧವನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ಧೇನೆ ಎಂದು ಆರ್​ಸಿಬಿ ಪುರುಷರ ತಂಡದ ನೂತನ ಕೋಚ್​ ಆ್ಯಂಡಿ ಪ್ಲವರ್​​ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ್ಯಂಡಿ ಪ್ಲವರ್​ ಈ ಹಿಂದೆ ಲಖನೌ ಸೂಪರ್ ಜೈಂಟ್ಸ್​ ತಂಡದ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಜುಲೈ ತಿಂಗಳಲ್ಲಿ ಫ್ರಾಂಚೈಸಿಯು ಜಸ್ಟಿನ್​ ಲ್ಯಾಂಗರ್​ ಅವರನ್ನು ತಂಡಕ್ಕೆ ಮುಖ್ಯ ಕೋಚ್​ ಆಗಿ ನೇಮಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net