

ನವದೆಹಲಿ: ಅಮೆರಿಕಕ್ಕೆ 2.90 ಕೋಟಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ರಫ್ತು ಮಾಡಲಾಗುವುದೆಂದು ಭಾರತ ಹೇಳಿದೆ. ಗುಜರಾತ್ನ ಮೂರು ಘಟಕಗಳಲ್ಲಿ ತಯಾರಾದ 2.90 ಕೋಟಿ ಮಾತ್ರೆಗಳು ಮೊದಲ ಹಂತದಲ್ಲಿ ಅಮೆರಿಕಕ್ಕೆ ಸರಬರಾಜು ಆಗುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅದ್ಭುತ ಗೆಳೆಯ, ಒಳ್ಳೆಯ ಮನುಷ್ಯ ಎಂದು ಹೊಗಳಿದ್ದಾರೆ.
ಯಾವ್ಯಾವ ರೋಗಕ್ಕೆ ಬಳಕೆ?
ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯು ಕ್ಲೋರೊಕ್ವಿನ್ ಮಾತ್ರೆಗಿಂತ ಕಡಿಮೆ ನಂಜಿನಾಂಶ ಹೊಂದಿರುವ ಕಾರಣ ಇದನ್ನು ಮಲೇರಿಯಾ ಹೊರತಾಗಿ ಇನ್ನಿತರ ಸಾಂಕ್ರಾಮಿಕ ರೋಗಗಳ ತಡೆಗೂ ಶಿಫಾರಸು ಮಾಡಲಾಗಿದೆ. ಸಂಧಿವಾತ ಮತ್ತು ಚರ್ಮ ಕ್ಷಯದಂತಹ (ಲೂಪಸ್) ಕಾಯಿಲೆಗಳಿಗೂ ಈ ಮಾತ್ರೆಯನ್ನು ವೈದ್ಯರು ಶಿಫಾರಸು ಮಾಡಿದ ನಿದರ್ಶನವಿದೆ.
ಮಾತ್ರೆಗೆ ಹೆಚ್ಚಿದ ಬೇಡಿಕೆ
ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗೆ ಪಾಶ್ಚಿಮಾತ್ಯ ದೇಶಗಳಿಂದಲೂ ಬೇಡಿಕೆ ಬರುತ್ತಿದೆ. ನೆರೆಹೊರೆ ದೇಶಗಳಾದ ಶ್ರೀಲಂಕಾ, ನೇಪಾಳ ಮಾತ್ರೆ ಪೂರೈಕೆಗೆ ಮನವಿ ಮಾಡಿದ್ದರೆ, ಬ್ರೆಜಿಲ್ ರಾಮಾಯಾಣದ ಹಿನ್ನೆಲೆ ಮುಂದಿಟ್ಟು ವಿನಂತಿ ಮಾಡಿಕೊಂಡಿದೆ. ರಾಮ-ರಾವಣರ ಯುದ್ಧದ ವೇಳೆ ಇಂದ್ರಜಿತುವಿನ ಬಾಣದಿಂದ ಮೂರ್ಛಿತನಾದ ಲಕ್ಷ್ಮಣನನ್ನು ಬದುಕಿಸಲು ವಿಶೇಷ ಗಿಡಮೂಲಿಕೆ ಅಗತ್ಯವಾದಾಗ ಹನುಮಂತ ಹಿಮಾಲಯದಿಂದ ಸಂಜೀವಿನಿ ತಂದಿದ್ದ. ಈಗ ಇಂಥದ್ದೇ ನೆರವನ್ನು ನಾವು ಬಯಸುತ್ತಿದ್ದೇವೆ. ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಪೂರೈಸಿದರೆ ದೇವರ ಕೃಪೆಯಿಂದ ಸೋಂಕಿತರು ಗುಣಮುಖರಾಗುತ್ತಾರೆ ಎಂದು ಬ್ರೆಜಿಲ್ ಹೇಳಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಬ್ರೆಜಿಲ್ ಮತ್ತು ಭಾರತ ಒಗ್ಗೂಡಬೇಕು ಜನರ ಆರೋಗ್ಯಕ್ಕಾಗಿ ಪರಸ್ಪರರು ಹಾರೈಸಬೇಕು. ಔಷಧ ಪೂರೈಕೆಯ ಬೇಡಿಕೆಯನ್ನು ಪ್ರಧಾನಿ ಮೋದಿಯವರು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಶೇ. 70 ಮಾತ್ರೆ ಭಾರತದಲ್ಲಿ ಉತ್ಪಾದನೆ
ಜಾಗತಿಕವಾಗಿ ಉತ್ಪಾದನೆಯಾಗುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯಲ್ಲಿ ಶೇ. 70 (200ಎಂಜಿಯ 20 ಕೋಟಿ ಮಾತ್ರೆ) ಭಾರತದಲ್ಲೇ ತಯಾರಾಗುತ್ತದೆ. ಈ ಮಾತ್ರೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕರೊನಾ ಸೋಂಕಿತರ ಚಿಕಿತ್ಸೆಗೆ ಶಿಫಾರಸು ಮಾಡಿದೆ. ಇದನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಕೂಡ ಅನುಮೋದಿಸಿದೆ. ಭಾರತದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ (ಫೆಬ್ರವರಿವರೆಗೆ) -ಠಿ; 152.80 ಕೋಟಿ ಮೌಲ್ಯದ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಬಿಕರಿಯಾಗಿದೆ. ಮುಂಬೈ ಮೂಲದ ಇಪ್ಕಾ ಲ್ಯಾಬ್ ಈ ಮಾತ್ರೆಯನ್ನು ಶೇ. 82 ಉತ್ಪಾದಿಸುತ್ತದೆ. ಎಚ್ಸಿಕ್ಯೂಎಸ್ ಮತ್ತು ಎಚ್ವೈಕ್ಯೂ ಬ್ರಾ್ಯಂಡ್ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಶೇ. 80ರಷ್ಟು ಮಾತ್ರೆ ರಫ್ತಾಗುತ್ತದೆ. ಅಹಮದಾಬಾದ್ ಮೂಲದ ಕ್ಯಾಡಿಲಾ ಹೆಲ್ತ್ಕೇರ್ (ಜೈಡಸ್ ಕ್ಯಾಡಿಲಾ) ಜೈ ಕ್ಯೂ ಬ್ರಾ್ಯಂಡ್ನ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯನ್ನು ಉತ್ಪಾದಿಸುತ್ತದೆ. ಇದು ಶೇ. 8ರಷ್ಟು ಮಾರುಕಟ್ಟೆ ಹೊಂದಿದೆ. ಉಳಿದಂತೆ ವ್ಯಾಲೇಸ್ ಫಾರ್ವಸ್ಯುಟಿಕಲ್ (ಒಎಕ್ಸ್ಸಿಕ್ಯೂ), ಟೊರೆಂಟ್ ಫಾರ್ವಸ್ಯುಟಿಕಲ್ ಮತ್ತು ಓವರ್ಸೀಸ್ ಹೆಲ್ತ್ಕೇರ್ ಕಂಪನಿ (ಕಾರ್ಟಿಕ್ವಿನ್) ಸಣ್ಣ ಪ್ರಮಾಣದಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಉತ್ಪಾದಿಸುತ್ತವೆ.