

ಈ ಹೊಸ ಬ್ರಿಡ್ಜ್ ತಮಿಳುನಾಡು ಪ್ರಾವಸೋದ್ಯಮಕ್ಕೆ ಇನ್ನಷ್ಟು ವೇಗವನ್ನು ನೀಡಲಿದ್ದು, ಈ ಬ್ರಿಡ್ಜ್ ರಾಮೇಶ್ವರಂಗೆ ತೆರಳುವ ಭಕ್ತರಿಗೆ ಹಾಗೂ ಧನುಷ್ಕೋಡಿ ಪ್ರವಾಸಿಗರಿಗೆ ಹೆಚ್ಚು ಅನುಕೂಲವನ್ನು ಕಲ್ಪಿಸಲಿದೆ.
ರಾಮೇಶ್ವರಂ: ಇಂದು (6) ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಲಾಗಿರುವ ಭಾರತದ ಮೊಟ್ಟಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸೇತುವೆಯನ್ನು ಅಮೆರಿಕದ ಗೋಲ್ಡನ್ ಗೇಟ್ ಸೇತುವೆ, ಯುಕೆಯ ಟವರ್ ಸೇತುವೆ ಮತ್ತು ಡೆನ್ಮಾರ್ಕ್ ಹಾಗೂ ಸ್ವೀಡನ್ ನಡುವಿನ ಓರೆಸುಂಡ್ ಸೇತುವೆಯಂತಹ ಪ್ರಸಿದ್ಧ ಸೇತುವೆಗಳಿಗೆ ಹೋಲಿಸಲಾಗುತ್ತಿದೆ. ಈ ಸೇತುವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರದ ವೇಳೆ ಈ ಸೇತುವೆಯನ್ನು ಮೇಲಕ್ಕೆ ಎತ್ತಬಹುದಾಗಿದೆ.
ತಮಿಳುನಾಡಿನಲ್ಲಿ ರಾಮನವಮಿಯಂದು ಪ್ರಧಾನಿ ನರೇಂದ್ರ ಮೋದಿ ದೇಶದ ಮೊದಲ ಸಮುದ್ರ ಸೇತುವೆಯಾದ ಹೊಸ ಪಂಬನ್ ಸೇತುವೆಯನ್ನು ಉದ್ಘಾಟಿಸಿದರು. ಸೇತುವೆಯ ಕೆಳಗೆ ಹಾದುಹೋದ ಕೋಸ್ಟ್ ಗಾರ್ಡ್ ಹಡಗು ಮತ್ತು ಹೊಸ ರಾಮೇಶ್ವರಂ ಹಾಗೂ ತಾಂಬರಂ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು.
ಈ ಸೇತುವೆಯು ರಾಮೇಶ್ವರಂ ದ್ವೀಪವನ್ನು ಮುಖ್ಯ ಭೂಭಾಗದಲ್ಲಿರುವ ಮಂಟಪದೊಂದಿಗೆ ಸಂಪರ್ಕಿಸುತ್ತದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ನವರತ್ನ ಪಿಎಸ್‌ಯು ಆಗಿರುವ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ 700 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯು 72.5 ಮೀಟರ್ ನ್ಯಾವಿಗೇಷನಲ್ ಸ್ಪ್ಯಾನ್ ಅನ್ನು ಹೊಂದಿದ್ದು, ಇದನ್ನು ಲಂಬವಾಗಿ 17 ಮೀಟರ್‌ಗೆ ಎತ್ತಬಹುದು, ಇದರಿಂದಾಗಿ ಹಡಗುಗಳು ಕೆಳಗೆ ಸುರಕ್ಷಿತವಾಗಿ ಹಾದುಹೋಗಬಹುದು. ಹಳೆಯ ಪಾಂಬನ್ ಸೇತುವೆ ತೆರೆಯಲು 45 ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿದ್ದವು.
(ಏಜೆನ್ಸೀಸ್)
ಆದರೆ ಈ ಹೊಸ ಸೇತುವೆಯನ್ನು ತೆರೆಯಲು ಕೇವಲ 5 ನಿಮಿಷಗಳಷ್ಟೇ ಸಮಯ ಬೇಕಾಗುತ್ತದೆ. ಇದು ಸಮಯ ಉಳಿತಾಯ ಮತ್ತು ಸಮರ್ಥ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಈ ಸೇತುವೆಯನ್ನು ಡಬಲ್ ಟ್ರ್ಯಾಕ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ, ಇದರಿಂದ ಎರಡು ರೈಲುಗಳು ಏಕಕಾಲದಲ್ಲಿ ಸಂಚರಿಸಬಹುದು. ಸೇತುವೆಯ ಒಟ್ಟು ಉದ್ದ 2.08 ಕಿಲೋಮೀಟರ್ ಆಗಿದ್ದು, ಇದು ಮನ್ನಾರ್ ಕೊಲ್ಲಿಯಲ್ಲಿ ಸಮುದ್ರದ ಮೇಲೆ ನಿರ್ಮಾಣವಾಗಿದೆ. ಇದು ರಾಮೇಶ್ವರಂ ದ್ವೀಪವನ್ನು ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ.