

ಹಾಸನ: ಅಲೆಮಾರಿ ಸಮುದಾಯದ ವಿದ್ಯಾವಂತರಿಗೆ ಉದ್ಯೋಗಾವಕಾಶ, ಭೂಮಿ ಮಂಜೂರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹಕ್ಕಿಪಿಕ್ಕಿ ಸಮಾಜದ ಮುಖಂಡ, ಅಂಗಡಿಹಳ್ಳಿಯ ಹೂರಾಜ್ ಹೇಳಿದರು.
ಜ.26ರ ಗಣರಾಜ್ಯೋತ್ಸಕ್ಕೆ ವಿಶೇಷ ಅತಿಥಿಯಾಗಿ ದೆಹಲಿಗೆ ತೆರಳಿದ್ದ ಬೇಲೂರು ತಾಲೂಕು ಅಂಗಡಿಹಳ್ಳಿಯ ಹೂರಾಜ್ ಹಾಗೂ ಚಂದೋಸೆ ದಂಪತಿ ಸೋಮವಾರ ರಾತ್ರಿ ಸ್ವಗ್ರಾಮ ತಲುಪಿದರು. ದೇಶದಲ್ಲಿ ಅಲೆಮಾರಿ ಸಮುದಾಯವಿದೆ ಎಂಬ ಮಾಹಿತಿಯೇ ಕೆಲವರಿಗೆ ಇಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ನಮ್ಮನ್ನು ಗುರುತಿಸಿರುವುದು ಸಂತೋಷ ತಂದಿದೆ. ಜ.21ರಿಂದ ಫೆ.2ರವರೆಗೆ ಯಾವುದೇ ಕೊರತೆಯಾಗದಂತೆ ಉಪಚಾರ ಸಿಕ್ಕಿತು. ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ಮೋದಿ, ಸಚಿವರಾದ ಅರ್ಜುನ್ ಮುಂಡಾ, ರಾಜನಾಥ್ ಸಿಂಗ್, ರೇಣುಕಾ ಸಿಂಗ್ ಅವರ ಭೇಟಿ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ‘ವಿಜಯವಾಣಿ’ ಜತೆಗೆ ಅಭಿಪ್ರಾಯ ಹಂಚಿಕೊಂಡರು.
ಜ.24ರಂದು ಮೋದಿ ನಮ್ಮೊಂದಿಗೆ ಸಂವಾದ ನಡೆಸಿದರು. ಸಮಸ್ಯೆಗಳ ಪಟ್ಟಿ ಮಾಡಿಕೊಂಡಿದ್ದ ನಾವು ಅದನ್ನು ಸಚಿವ ಅರ್ಜುನ್ ಮುಂಡಾ ಅವರಿಗೆ ತಲುಪಿಸಿದೆವು. ನಂತರ ಅದನ್ನು ಪ್ರಧಾನಿ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ಹೂರಾಜ್ ಹೇಳಿದರು. ಹಾಸನ ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಸ್ಮಶಾನಕ್ಕೂ ಜಾಗವಿಲ್ಲ ಎಂಬ ಮಾತು ಕೇಳಿ ಸಚಿವ ಅರ್ಜುನ್ ಮುಂಡಾ ಆಶ್ಚರ್ಯ ವ್ಯಕ್ತಪಡಿಸಿದರು. ಸಮಸ್ಯೆ ಇಷ್ಟೊಂದು ಗಾಢವಾಗಿದ್ದರೂ ಸರ್ಕಾರ ಸುಮ್ಮನಿರುವುದು ಏಕೆ ಎಂದು ಪ್ರಶ್ನಿಸಿದರು. ಆಗಬೇಕಿರುವ ಕೆಲಸಗಳ ಕುರಿತು ನಿರಂತರ ಅಪ್ಡೇಟ್ ನೀಡುತ್ತೇವೆ. ನೀವು ನಮ್ಮೊಂದಿಗೆ ಸಂಪರ್ಕ ದಲ್ಲಿರಬೇಕು. ರಾಜ್ಯ ಬಜೆಟ್ನಲ್ಲಿ ಈ ಸಂಬಂಧ ಅನುದಾನ ಮೀಸಲಿಡುವಂತೆ ಶಿಫಾರಸು ಮಾಡುತ್ತೇವೆ ಎಂಬ ಸಚಿವರು ಭರವಸೆ ನೀಡಿದ್ದಾರೆ ಎಂದರು. ನನಗೆ ಹಿಂದಿ ಸ್ಪಷ್ಟವಾಗಿ ಗೊತ್ತಿರದ ಕಾರಣ ಪಕ್ಕದಲ್ಲಿ ಕುಳಿತಿದ್ದ ಮಹಾರಾಷ್ಟ್ರದ ಲ್ಷ್ಮಬಾಯಿ ಅನುವಾದ ಮಾಡಿದರು. ನನ್ನ ಭಾಷಣಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಹೇಳಿದರು.