ರಾಷ್ಟ್ರೀಯ ಸನ್ನದ್ಧತೆ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಚರ್ಚೆ| Modi meeting

PM Modi
Published on

ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮೋದಿ, ರಾಷ್ಟ್ರೀಯ ಸನ್ನದ್ಧತೆ ಮತ್ತು ಅಂತರ ಸಚಿವಾಲಯ ಸಮನ್ವಯವನ್ನು ಪರಿಶೀಲಿಸಿದರು.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ನಡೆಸಿದ ನಿಖರ ಮಿಲಿಟರಿ ದಾಳಿ ಹಾಗೂ ಆಪರೇಷನ್ ಸಿಂಧೂರ್ ನಡೆಸಿದ ಹಿನ್ನೆಲೆಯಲ್ಲಿ ಮತ್ತು ಗಡಿಗಳಲ್ಲಿ ಮೂಲಸೌಕರ್ಯ ಜಾಲಗಳಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಿಧಿಸಿರುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರದ ಕಾರ್ಯದರ್ಶಿಗಳು ಸಂಪೂರ್ಣ ಸರ್ಕಾರಿ ವಿಧಾನದೊಂದಿಗೆ ತಮ್ಮ ಯೋಜನೆಯನ್ನು ವಿವರಿಸಿದ್ದಾರೆ. ಸಂಘರ್ಷಕ್ಕೆ ಸಂಬಂಧಿಸಿದಂತೆ ಎಲ್ಲಾ ಸಚಿವಾಲಯಗಳು ತಮ್ಮ ಕಾರ್ಯಸಾಧ್ಯತೆಗಳನ್ನು ಗುರುತಿಸಿವೆ ಮತ್ತು ಪ್ರಕ್ರಿಯೆಗಳನ್ನು ಬಲಪಡಿಸುತ್ತಿವೆ. ಸಚಿವಾಲಯಗಳು ಎಲ್ಲಾ ರೀತಿಯ ಉದಯೋನ್ಮುಖ ಸಂದರ್ಭಗಳನ್ನು ಎದುರಿಸಲು ಸಿದ್ಧವಾಗಿವೆ.

ಕಾರ್ಯದರ್ಶಿಗಳು ತಮ್ಮ ಸಚಿವಾಲಯದ ಕಾರ್ಯಾಚರಣೆಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಲು ಮತ್ತು ಅಗತ್ಯ ವ್ಯವಸ್ಥೆಗಳ ಪರಿಪೂರ್ಣ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಸಿದ್ಧತೆ, ತುರ್ತು ಪ್ರತಿಕ್ರಿಯೆ ಮತ್ತು ಆಂತರಿಕ ಸಂವಹನ ಶಿಷ್ಟಾಚಾರಗಳ ಮೇಲೆ ನಿರ್ದಿಷ್ಟ ಗಮನ ಹರಿಸಲು ಸಭೆಯಲ್ಲಿ ನಿರ್ದೇಶಿಸಲಾಯಿತು.

(ಏಜೆನ್ಸೀಸ್)

ಈ ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ಇವುಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಎದುರಿಸುವ ಪ್ರಯತ್ನಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯ್ತು. ರಾಜ್ಯ ಅಧಿಕಾರಿಗಳು ಮತ್ತು ತಳಮಟ್ಟದ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳಲು ಸಚಿವಾಲಯಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಮತ್ತು ರಕ್ಷಣಾ, ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ, ವಿದ್ಯುತ್, ಆರೋಗ್ಯ ಮತ್ತು ದೂರಸಂಪರ್ಕ ಸೇರಿದಂತೆ ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net