

Operation Sindoor: ದೇಶಭಕ್ತಿಯ ಉತ್ಸಾಹದಿಂದ ಪ್ರೇರಿತರಾಗಿ ದಂಪತಿಗಳು ತಮ್ಮ ನವಜಾತ ಶಿಶುವಿಗೆ ಆಪರೇಷನ್ ಸಿಂಧೂರ ನಂತರ 'ಸಿಂಧೂರಿ' ಎಂದು ಹೆಸರಿಸಿಟ್ಟ ಭಾವನಾತ್ಮಕ ಘಟನೆ ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ನಡೆದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಪ್ರತಿಕಾರ ತೀರಿಸಿಕೊಂಡಿದೆ. ಇದರಿಂದ ಇಡೀ ಭಾರತ ದೇಶವೇ ಸಂತಸದಿಂದ ಭಾರತೀಯ ಸೇನೆಯನ್ನು ಕೊಂಡಾಡಿದೆ.
ಅದೇ ರೀತಿ ಇದೀಗ ಬಿಹಾರದ ಕಟಿಹಾರ್ ಜಿಲ್ಲೆಯ ಬಾಲ್ತಿ ಮಹೇಶಪುರ ಗ್ರಾಮದ ನಿವಾಸಿಗಳಾದ ಸಂತೋಷ್ ಮಂಡಲ್ ಮತ್ತು ರಾಖಿ ಕುಮಾರಿ ದಂಪತಿಗಳಿಗೆ ಈ ದಾಳಿ ನಡೆದ ದಿನದಂದೇ ಹೆಣ್ಣು ಮಗು ಜನಿಸಿದ್ದು, ಅವಳಿಗೆ ಸಿಂಧೂರಿ ಎಂದು ಹೆಸರಿಡುವುದರ ಮೂಲಕ ಆಪರೇಷನ್ ಸಿಂಧೂರ್ ಬಗ್ಗೆ ಭಾರತೀಯರು ಹೊಂದಿರುವ ಆಳವಾದ ದೇಶಭಕ್ತಿ ಮತ್ತು ಭಾವನಾತ್ಮಕ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾರೆ.
"ಪಾಕಿಸ್ತಾನದ ವಿರುದ್ಧದ ಗೆಲುವು ಮತ್ತು ಒಂದೇ ದಿನ ನಮ್ಮ ಮಗಳ ಜನನ, ಎರಡೂ ನಮ್ಮ ಕುಟುಂಬಕ್ಕೆ ಹೆಮ್ಮೆಯ ವಿಷಯಗಳಾಗಿವೆ" ಎಂದು ಅವರ ಕುಟುಂಬದವರು ಸಂತೋಷದಿಂದ ಹೇಳಿದ್ದಾರೆ.
ದೇಶಭಕ್ತಿ ಪ್ರತಿಯೊಬ್ಬ ಭಾರತೀಯನನ್ನು ಹೇಗೆ ಮುಟ್ಟುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಮಗು ಜನಿಸಿದ ಖಾಸಗಿ ನರ್ಸಿಂಗ್ ಹೋಂ ಕಟಿಹಾರ್ ಸೇವಾ ಸದನ್‌ನ ವ್ಯವಸ್ಥಾಪಕ ಪಪ್ಪು ಕುಮಾರ್ ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಅನ್ನು ಪ್ರಾರಂಭಿಸಿ , ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿ ಪಾಕಿಸ್ತಾನದ 80ಕ್ಕೂ ಹೆಚ್ಚು ಉಗ್ರರನ್ನು ಮಟ್ಟ ಹಾಕಿದೆ. (ಏಜೆನ್ಸೀಸ್)