ಇಂದು ಅಮೆರಿಕ ಅಧ್ಯಕ್ಷ ಬೈಡೆನ್ ಜತೆ ಮಹತ್ವದ ಸಭೆ: ಪಂಚ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ

Modi
Published on

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ಅಮೆರಿಕದ ಪ್ರವಾಸ ಪ್ರಮುಖ ಕಂಪನಿಗಳ ಸಿಇಒಗಳ ಜತೆಗಿನ ಮಾತುಕತೆ ಮೂಲಕ ಗುರುವಾರ ಆರಂಭವಾಗಿದೆ. ಐದು ವಿಭಿನ್ನ ಕ್ಷೇತ್ರಗಳಿಗೆ ಸೇರಿದ ಕಂಪನಿಗಳ ಸಿಇಒಗಳು ಪ್ರತ್ಯೇಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಮಾತುಕತೆ ನಡೆಸಿದರು.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇದು ಇವರಿಬ್ಬರ ನಡುವಿನ ಮೊದಲ ಮುಖಾಮುಖಿ ಭೇಟಿ. ಇದಾದ ನಂತರದಲ್ಲಿ ಕ್ವಾಡ್ ಸದಸ್ಯ ರಾಷ್ಟ್ರಗಳಾದ ಜಪಾನ್ ಮತ್ತು ಆಸ್ಟ್ರೇಲಿಯಾದ ನಾಯಕರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಗುರುವಾರ ವಾಷಿಂಗ್ಟನ್ ಡಿಸಿ ತಲುಪಿದ್ದು, ವಿಮಾನ ನಿಲ್ದಾಣದಲ್ಲಿ ಭಾರತೀಯ ಅಮೆರಿಕನ್ನರ ನಿಯೋಗ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿತು. ಬಳಿಕ ಹೋಟೆಲ್​ನಲ್ಲಿ ಅನಿವಾಸಿ ಭಾರತೀಯ ಸಮುದಾಯದವರೊಂದಿಗೆ ಮಾತುಕತೆ ನಡೆಸಿದರು. ಶುಕ್ರವಾರ ಅಮೆರಿಕ ಅಧ್ಯಕ್ಷ ಜೊ ಬೈಡನ್ ಜತೆ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಪ್ರಿಡೇಟರ್ ಡ್ರೋನ್: ಜನರಲ್ ಅಟೋಮಿಕ್ಸ್ ಕಂಪನಿಯ ಸಿಇಒ ವಿವೇಕ್ ಲಾಳ್ ಜತೆಗಿನ ಮಾತುಕತೆ ಹೆಚ್ಚು ಗಮನಸೆಳೆದಿದೆ. ಪ್ರಿಡೇಟರ್ ಡ್ರೋನ್ ಖರೀದಿ ವಿಚಾರದಿಂದಾಗಿ ಇದಕ್ಕೆ ಪ್ರಾಮುಖ್ಯತೆ ಬಂದಿದೆ. ಭಾರತ ಅಮೆರಿಕದಿಂದ 30 ಪ್ರಿಡೇಟರ್ ಡ್ರೋನ್​ಗಳನ್ನು ಖರೀದಿ ಮಾಡಿದ್ದು, ಈಗಾಗಲೇ ಎರಡು ಪ್ರಿಡೇಟರ್ ಎಂಕ್ಯೂ-9 ಡ್ರೋನ್​ಗಳು ಭಾರತೀಯ ನೌಕಾಪಡೆ ಸೇರ್ಪಡೆಗೊಂಡಿವೆ.

ಆಕಸ್​ನಲ್ಲಿ ಜಪಾನ್, ಭಾರತಕ್ಕಿಲ್ಲ ಅವಕಾಶ

ಆಸ್ಟ್ರೇಲಿಯಾ, ಬ್ರಿಟನ್ ಜತೆಗೂಡಿ ಇಂಡೋ ಪೆಸಿಫಿಕ್ ಪ್ರಾಂತ್ಯದ ಸುರಕ್ಷತೆಗಾಗಿ ಹೊಸ ತ್ರಿಪಕ್ಷೀಯ ಪಾಲುದಾರಿಕೆ ‘ಆಕಸ್’ ಅನ್ನು ಅಮೆರಿಕ ಆರಂಭಿಸಿದೆ. ಇದರಲ್ಲಿ ಜಪಾನ್ ಅಥವಾ ಭಾರತವನ್ನು ಸೇರ್ಪಡೆಗೊಳಿಸಲು ಅವಕಾಶ ಇಲ್ಲ, ಸಾಧ್ಯತೆಯೂ ಇಲ್ಲ ಎಂದು ವೈಟ್​ಹೌಸ್ ಪ್ರೆಸ್ ಸೆಕ್ರೆಟರಿ ಜೆನ್ ಸಕಿ ಗುರುವಾರ ಸ್ಪಷ್ಟಪಡಿಸಿದರು.

ಪಂಚ ಸವಾಲುಗಳು

ಮೋದಿ ಅವರ 5 ದಿನಗಳ ಅಮೆರಿಕ ಪ್ರವಾಸದಲ್ಲಿ ಭಾರತ ಎದುರಿಸುತ್ತಿರುವ 5 ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.

1. ಕ್ವಾಡ್: ಇದು ಆಸ್ಟ್ರೇಲಿಯಾ, ಇಂಡಿಯಾ, ಜಪಾನ್, ಅಮೆರಿಕಗಳ ವ್ಯೂಹಾತ್ಮಕ ಸಂಘಟನೆ. ಭಾರತ ಕೇಂದ್ರಿತ ನೀತಿಗೆ ಅನುಗುಣವಾಗಿ ರಚನೆಯಾದ ಪಾಲುದಾರಿಕೆ ಇದು. ಅಮೆರಿಕ ಭೇಟಿ ವೇಳೆ ಸೆ. 24ರಂದು ಕ್ವಾಡ್ ನಾಯಕರ ಜತೆಗೆ ಮಾತುಕತೆ ನಿಗದಿಯಾಗಿದೆ. ಆಕಸ್ ಡೀಲ್ ಮತ್ತು ಇತರೆ ವಿಚಾರಗಳು ಗಮನಸೆಳೆದಿವೆ.

2. ತಾಲಿಬಾನ್: ಅಫ್ಘನ್​ನಲ್ಲಿ ತಾಲಿಬಾನ್ ಆಡಳಿತ ಮತ್ತು ನಂತರದ ಬೆಳವಣಿಗೆಗಳು ಜಗತ್ತನ್ನು ಚಿಂತೆಗೆ ದೂಡಿವೆ. ಭಾರತದ ಮಟ್ಟಿಗೆ ದೊಡ್ಡ ಸುರಕ್ಷಾ ಬೆದರಿಕೆ ಎದುರಾಗಿದೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇತರೆ ರಾಷ್ಟ್ರ ನಾಯಕರೊಂದಿಗೆ ಮಾತುಕತೆ ನಡೆಯಲಿದೆ.

3. ಚೀನಾದ ಬೆದರಿಕೆ: ಚೀನಾದ ಜತೆಗಿನ ಭಾರತದ ಬಾಂಧವ್ಯದಲ್ಲಿ ವಿಶ್ವಾಸದ ಕೊರತೆ ಎದ್ದುಕಾಣತೊಡಗಿದೆ. ಕಳೆದ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ಇದು ಆರಂಭವಾಗಿದ್ದು, ಈಗ ತಾಲಿಬಾನ್ ಆಡಳಿತಕ್ಕೆ ಅಫ್ಘನ್ ಬಿದ್ದಿರುವ ಕಾರಣ ಇನ್ನಷ್ಟು ಭದ್ರತಾ ಬೆದರಿಕೆ ಭಾರತಕ್ಕೆ ಎದುರಾಗಿದೆ. ಭಾರತ ಕೇಂದ್ರಿತ ಕ್ವಾಡ್ ಬಗ್ಗೆ ಚೀನಾಕ್ಕೆ ಅಸಮಾಧಾನವಿದೆ.

4. ಕಾಶ್ಮೀರ: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ವಿಚಾರವನ್ನು ಪಾಕಿಸ್ತಾನ ಪದೇಪದೆ ಪ್ರಸ್ತಾಪಿಸುತ್ತಿದೆ. ತಾಲಿಬಾನ್ ಕೂಡ ಕಾಶ್ಮೀರಿ ಮುಸ್ಲಿಮರ ಪರ ಧ್ವನಿ ಎತ್ತುವುದಾಗಿ ಹೇಳಿದೆ. ಈ ಬೆಳವಣಿಗೆ ಭಾರತಕ್ಕೆ ಇನ್ನಷ್ಟು ಸುರಕ್ಷಾ ಬೆದರಿಕೆಯನ್ನು ಒಡ್ಡಿದೆ.

5. ಲಸಿಕೆ ಅಭಿಯಾನ: ಕೋವಿಡ್ 19 ಸಂಕಷ್ಟದಿಂದ ಪಾರಾಗಲು ಲಸಿಕೆ ಪೂರೈಕೆ ವಿಚಾರ ವಿಶ್ವಸಂಸ್ಥೆ ಸಭೆಯಲ್ಲಿ ಚರ್ಚೆಗೆ ಒಳಗಾಗಲಿದೆ. ಬ್ರಿಟನ್​ನ ಲಸಿಕೆ ಪ್ರಮಾಣ ಪತ್ರ ನೀತಿಯನ್ನು ಭಾರತ ಖಂಡಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತ ಎಲ್ಲದರಲ್ಲೂ ಸವಾಲುಗಳನ್ನು ಎದುರಿಸುತ್ತ ಮುಂದೆ ಸಾಗುತ್ತಿದೆ.

ತಾಲಿಬ್​ಗೆ ಯುಎನ್ ಮಾನ್ಯತೆ ಇಲ್ಲ?

ವಿಶ್ವಸಂಸ್ಥೆಯ ಜನೆರಲ್ ಅಸೆಂಬ್ಲಿ ಚಾಲ್ತಿಯಲ್ಲಿದ್ದು, ಅದರಲ್ಲಿ ಮಾತನಾಡುವ ಅವಕಾಶ ಅಫ್ಘಾನಿಸ್ಥಾನದ ತಾಲಿಬಾನ್ ಆಡಳಿತಕ್ಕೆ ಸಿಗುವುದು ಸಂಶಯ. ವಿಶ್ವಸಂಸ್ಥೆಯಲ್ಲಿ ಈ ಹಿಂದಿನ ನಾಗರಿಕ ಸರ್ಕಾರದ ಪ್ರತಿನಿಧಿಯೇ ಮುಂದುವರಿದಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದ ಆಗ್ರಹಕ್ಕೆ ತಕ್ಕಂತೆ ತಾಲಿಬಾನ್ ಸರ್ಕಾರ ರಚಿಸದ ಕಾರಣ ಅದಕ್ಕೆ ವಿಶ್ವಸಂಸ್ಥೆ ಪ್ರವೇಶಿಸುವ ಅವಕಾಶ ನೀಡಲು ಸದಸ್ಯರಾಷ್ಟ್ರಗಳ ಸಮಿತಿ ಹಿಂದೇಟು ಹಾಕಿವೆ. ವೇಳಾಪಟ್ಟಿ ಪ್ರಕಾರ ಅಫ್ಘನ್ ಪ್ರತಿನಿಧಿ ಸೆ.27ಕ್ಕೆ ಮಾತನಾಡಲು ಸಮಯ ನಿಗದಿಯಾಗಿದೆ.

ಅಮೆರಿಕದಲ್ಲಿ ಮೋದಿ ಮೊದಲ ದಿನ

# ಸಿಇಒಗಳ ಜತೆಗೆ ಮಾತುಕತೆ : ವಾಷಿಂಗ್ಟನ್ ಡಿಸಿಯಲ್ಲಿ ಜಾಗತಿಕ ಪ್ರಮುಖ ಕಂಪನಿಗಳ ಸಿಇಒಗಳ ಜತೆಗೆ ಮಾತುಕತೆ ನಿಗದಿಯಾಗಿತ್ತು. ಕ್ವಾಲ್​ಕೋಮ್ ಸಿಇಒ ಕ್ರಿಸ್ಟಿಯಾನೊ ಇ ಅಮೋನ್, ಅಡೋಬ್​ನ ಶಂತನು ನಾರಾಯಣ್, ಫಸ್ಟ್ ಸೋಲಾರ್​ನ ಮಾರ್ಕ್ ವಿಡ್​ವುರ್, ಜನರಲ್ ಅಟೋಮಿಕ್ಸ್​ನ ವಿವೇಕ್ ಲಾಳ್, ಬ್ಲಾ್ಯಕ್​ಸ್ಟೋನ್​ನ ಸ್ಟೀಫೆನ್ ಎ ಷ್ವಾಝರ್å್ಮನ್ ಅವರೊಂದಿಗೆ ಪ್ರಧಾನಿ ಮೋದಿ ಪ್ರತ್ಯೇಕ ಮಾತುಕತೆ ನಡೆಸಿದರು. ಈ ಪೈಕಿ ಶಂತನು ನಾರಾಯಣ್ ಮತ್ತು ವಿವೇಕ್ ಲಾಳ್ ಭಾರತೀಯ ಅಮೆರಿಕನ್ನರು. ಕ್ವಾಲ್​ಕೋಮ್ ಕಂಪನಿ ಭಾರತದಲ್ಲಿ 5ಜಿ ಸೇವೆ ಆರಂಭಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ.

# ಸ್ಕಾಟ್ ಮಾರಿಸನ್ ಜತೆಗೆ ಸಭೆ : ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜತೆಗೆ ದ್ವಿಪಕ್ಷೀಯ ಮಾತುಕತೆ. ಸಮಗ್ರ ಪಾಲುದಾರಿಕೆ ವಿಚಾರ, ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ವ್ಯೂಹಾತ್ಮಕ ನಡೆ ಮತ್ತು ಇತರೆ ವಿಚಾರಗಳು ಕಾರ್ಯಸೂಚಿಯಲ್ಲಿದ್ದವು.

# ಸುಗಾ ಜತೆ ಚರ್ಚೆ: ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಿಗದಿಯಾಗಿತ್ತು. ಸೌತ್ ಚೀನಾ ಸಮುದ್ರ ಮತ್ತು ವಿವಿಧ ವಿಚಾರಗಳು ಮಾತುಕತೆಯ ಕಾರ್ಯಸೂಚಿಯಲ್ಲಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net