ಪ್ರಧಾನಿ ಮೋದಿ ರಷ್ಯಾ ಪ್ರವಾಸ; ಶೃಂಗಸಭೆಯಲ್ಲಿ ಪುಟಿನ್​ ಜತೆ ಮಹತ್ವದ ಚರ್ಚೆ

Untitled-design-2024-07-08T175022.014
Published on

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ರಾಜಧಾನಿ ಮಾಸ್ಕೋ ತಲುಪಿದ್ದಾರೆ. ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಮಾಸ್ಕೋ ತಲುಪಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಎರಡು ದಿನಗಳ ಭೇಟಿಗಾಗಿ ರಷ್ಯಾ ತಲುಪಿದ್ದಾರೆ. ಇಲ್ಲಿ ನಡೆಯುವ 22ನೇ ರಷ್ಯಾ-ಭಾರತ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೋದಿ ಅವರನ್ನು ರಷ್ಯಾದ 1ನೇ ಉಪಪ್ರಧಾನಿ (1ನೇ ಡಿಪಿಎಂ) ಡೆನಿಸ್ ಮಂಟುರೋವ್ ಸ್ವಾಗತಿಸಿದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ರಷ್ಯಾ ಭೇಟಿಯ ವೇಳೆ ಅವರನ್ನು ಬರಮಾಡಿಕೊಂಡ ಉಪ ಪ್ರಧಾನಿಗಿಂತ ಮಂಟುರೊವ್ ಹಿರಿಯ ಅಧಿಕಾರಿಯಾಗಿದ್ದಾರೆ.

ಮಂಗಳವಾರ (ಜುಲೈ 9) ನಡೆಯಲಿರುವ 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಪುಟಿನ್ ವ್ಯಾಪಾರ, ಇಂಧನ ಮತ್ತು ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳನ್ನು ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.

ಇಂಧನ, ಭದ್ರತೆ, ವ್ಯಾಪಾರ, ಹೂಡಿಕೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ವಿನಿಮಯ ಕ್ಷೇತ್ರಗಳನ್ನು ಒಳಗೊಂಡಂತೆ ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯು ಕಳೆದ 10 ವರ್ಷಗಳಿಂದ ಮುಂದುವರಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಎದುರು ನೋಡುತ್ತಿದ್ದೇನೆ ಮತ್ತು ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗೆಗಿನ ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ರಷ್ಯಾದೊಂದಿಗಿನ ಭಾರತದ ವ್ಯಾಪಾರ ಅಸಮತೋಲನವನ್ನು ಸರಿಪಡಿಸುವುದು ಮತ್ತು ಉಕ್ರೇನ್ ಯುದ್ಧದಲ್ಲಿ ಹೋರಾಡಲು ದಾರಿತಪ್ಪಿದ ಭಾರತೀಯ ನಾಗರಿಕರನ್ನು ಬಿಡುಗಡೆ ಮಾಡಿಸುವುದು ಪ್ರಧಾನಿ ಮೋದಿ ಅವರ ಮಾಸ್ಕೋ ಭೇಟಿಯ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಭಾರತೀಯ ಉನ್ನತ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net