ರಾಮಮಯ ಭಾರತದಲ್ಲಿ ಉತ್ಸಾಹದ ನವಪರ್ವ

Ram Mandir 1
Published on

ದೇಶ ಮಾತ್ರವಲ್ಲ ಪ್ರಪಂಚದಾದ್ಯಂತ ಕೋಟ್ಯಂತರ ರಾಮಭಕ್ತರು ಕಾತರದಿಂದ ಕಾಯುತ್ತಿದ್ದ ಕ್ಷಣ ಕಡೆಗೂ ಬುಧವಾರ ಸಾಕಾರಗೊಂಡಿತು. ಭಕ್ತಿ, ಶ್ರದ್ಧೆ, ಉತ್ಸಾಹದ ವಾತಾವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕಾಗಿ ಶಿಲಾನ್ಯಾಸ ನೆರವೇರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಕ್ಷಣಗಳಿಗೆ ಸಾಕ್ಷಿಯಾದರು. 36 ಆಧ್ಯಾತ್ಮಿಕ ಪರಂಪರೆಗಳಿಗೆ ಸೇರಿದ 135 ಸಂತರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಧ್ಯಾಹ್ನ 12 ಗಂಟೆ 44 ನಿಮಿಷ 8 ಸೆಕೆಂಡಿಗೆ ನಿಗದಿಯಾಗಿದ್ದ ಶುಭ ಮುಹೂರ್ತದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದರು. ಈ ಮೂಲಕ ಅಯೋಧ್ಯೆಯ ಇತಿಹಾಸ 492 ವರ್ಷಗಳ ಬಳಿಕ ಮಹತ್ವದ ತಿರುವು ಕಂಡಿದೆ. ಭೂಮಿಪೂಜೆಗೂ ಮುನ್ನ 9 ಶಿಲೆಗಳು, ಬೆಳ್ಳಿ ಇಟ್ಟಿಗೆಗೆ ಪೂಜೆ ನಡೆಸಲಾಯಿತು. ಇದರ ಮೇಲೆ ಶ್ರೀರಾಮನ ಹೆಸರು ಕೆತ್ತಲಾಗಿದೆ. ಶಿಲಾನ್ಯಾಸದ ಪೂಜೆಯಲ್ಲಿ ದೇಶದ 2 ಸಾವಿರ ಪವಿತ್ರ ಕ್ಷೇತ್ರಗಳ ಮೃತ್ತಿಕೆ, 100ಕ್ಕೂ ಅಧಿಕ ನದಿಗಳ ಪವಿತ್ರಜಲವನ್ನು ಬಳಸಲಾಯಿತು. 1989ರಲ್ಲಿ ದೇಶದ ವಿವಿಧೆಡೆಯಿಂದ ಅಯೋಧ್ಯೆಗೆ 2.75 ಲಕ್ಷ ಇಟ್ಟಿಗೆಗಳನ್ನು ಕಳಿಸಲಾಗಿದೆ. ಇವುಗಳಲ್ಲಿ 9 ಇಟ್ಟಿಗೆಗಳನ್ನು ಪೂಜೆಯಲ್ಲಿ ಬಳಸಿಕೊಳ್ಳಲಾಯಿತು. ಪೂಜೆಯ ಬಳಿಕ ಪ್ರಧಾನಿಯಿಂದ ಸಂಕಲ್ಪ ಮಾಡಿಸಲಾಯಿತು.

ನವರತ್ನ, ಚಿನ್ನದ ಇಟ್ಟಿಗೆ, ಪವಿತ್ರ ಜಲ...: ಬಕುಲ ಮರದ ಕಟ್ಟಿಗೆಯಿಂದ ತಯಾರಿಸಿದ ವಿಶೇಷ ಪಾತ್ರೆಯೊಂದರಲ್ಲಿ ಚಿನ್ನ, ಬೆಳ್ಳಿ ಸಹಿತ ನವರತ್ನಗಳನ್ನು ಹಾಕಲಾಯಿತು. ಶಿಲಾನ್ಯಾಸಕ್ಕಾಗಿ ನಿಗದಿ ಮಾಡಿದ್ದ ಸ್ಥಳದಲ್ಲಿ ಇದನ್ನು ಪ್ರಧಾನಿ ಮೋದಿ ಇರಿಸಿದರು. ಕಾಂಚಿಪುರಂ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಮಾರ್ಗದರ್ಶನದಂತೆ ಈ ಪದ್ಧತಿ ನಡೆಯಿತು. ಚಿನ್ನದ ಇಟ್ಟಿಗೆ, ಪವಿತ್ರ ಜಲವನ್ನು ಇದೇ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. 32 ಸೆಕೆಂಡುಗಳ ಮುಹೂರ್ತದಲ್ಲಿ ಪ್ರಧಾನಿ ಪೂರ್ಣಾಹುತಿ ನಡೆಸಿದರು. ಭೂಮಿ ಪೂಜೆಯ ಸಂಪೂರ್ಣ ಪ್ರಕ್ರಿಯೆ 40 ನಿಮಿಷಗಳ ಕಾಲ ನಡೆಯಿತು.

ಭೂಮಿಪೂಜೆ ಎಂದರೆ...: ಬ್ರಹ್ಮಾಂಡವನ್ನು ತಲೆಯಮೇಲೆ ಹೊತ್ತಿರುವ ಅನಂತಶೇಷನ ಪೂಜೆ ಮತ್ತು ಪೃಥಿವೀ (ಭೂದೇವಿ), ಅವಳ ಪತಿಯಾದ ವರಾಹದೇವರ ಪೂಜೆ.

21 ಅರ್ಚಕರ ತಂಡ

ಅಯೋಧ್ಯೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟಿದ್ದು 21 ಪಂಡಿತರ ತಂಡ. ಇದರಲ್ಲಿ ಅಯೋಧ್ಯೆ, ಕಾಶಿ, ದೆಹಲಿಯಿಂದ ತಲಾ ಐದು ಜನ, ಬಸ್ತಿ, ಪ್ರಯಾಗ, ಬೃಂದಾವನದಿಂದ ತಲಾ ಒಬ್ಬರು, ದಕ್ಷಿಣ ಭಾರತದಿಂದ ಮೂವರು ಪುರೋಹಿತರು ಆಗಮಿಸಿದ್ದರು. ಭೂಮಿಪೂಜೆಯ ಮುಖ್ಯ ವಿಧಿವಿಧಾನವನ್ನು ಚಂದ್ರಭಾನು ಪಾಂಡೆ ನಡೆಸಿಕೊಟ್ಟರು. ‘ಇದು ಅತ್ಯಂತ ಗೌರವದ ಕ್ಷಣ. ಪ್ರಧಾನಿ ಮೋದಿ ಶ್ರದ್ಧೆಯಿಂದ ಭೂಮಿಪೂಜೆ ನಡೆಸಿಕೊಟ್ಟರು. ಯಾವುದೇ ತಪು್ಪ ಸಂಭವಿಸಬಾರದೆಂಬ ಕಾಳಜಿಯಿಂದ ಪದೇಪದೆ ಸೂಚನೆ ನೀಡಲಾಗುತ್ತಿತ್ತು ಅಷ್ಟೇ. ಈ ಕಾರ್ಯಕ್ರಮ ಜೀವನದಲ್ಲೇ ಮರೆಯಲಾರದ್ದು’ ಎಂದು ಚಂದ್ರಭಾನು ಅಭಿಪ್ರಾಯ ಹಂಚಿಕೊಂಡರು.

ಮೋದಿ ಕೈಗೊಂಡ ಸಂಕಲ್ಪ

ಅದ್ಯ ಅಮುಕಗೋತ್ರಃ, ನರೇಂದ್ರ ದಾಮೋದರ್ ದಾಸ್ ಮೋದಿ ಯಜಮಾನಃ, ಸ್ವರಾಷ್ಟ್ರಪ್ರತಿನಿಧಿಭೂತಃ, ಚರಣಚರಜೀವಾನಾಂ ಭಾರತವಾಸಿನಾಂ.... ಪ್ರಾಣಿನಾಂ ಚ ಸಕಲಾರಿಷ್ಟ ದುರ್ನಿಮಿತ್ತ ಉಪಶಮನಪೂರ್ವಕಂ ನಿಖಿಲಕ್ಷೇಮಸುಭಿಕ್ಷಕಲ್ಯಾಣಪ್ರಾಪ್ತಯೇ ಅನಂತಬ್ರಹ್ಮಾಂಡನಾಯಕ ಸಪರಿಕರಭಗವತ್ ಸೀತಾರಾಮಪ್ರೀತಯೇ ನಿರ್ವಸ್ಯಮಾಣ ನೂತನಪ್ರಾಸಾದಾಂಗಭೂತಂ ಶಿಲಾಪೂಜನಂ ಪರಿಕರೈಃ ಸಹ ಅಹಂ ಕರಿಷ್ಯೇ |

ಇಂದು .... ಗೋತ್ರದವನಾದ, ನರೇಂದ್ರ ದಾಮೋದರ್ ದಾಸ್ ಮೋದಿ ಹೆಸರಿನ, ಯಜಮಾನನಾದ ನಾನು ನನ್ನ ರಾಷ್ಟ್ರದ ಪ್ರತಿನಿಧಿಯಾಗಿ, ಭಾರತವಾಸಿಗಳಾದ, ಪಾದಚಾರಿಗಳಾದ ಎಲ್ಲ ಜೀವರಿಗೆ ಹಾಗೂ ಸಕಲಪ್ರಾಣಿಗಳಿಗೆ ಸಕಲ ಅನಿಷ್ಟ ನಿವಾರಣೆ ಪೂರ್ವಕ ಸಮಸ್ತ ಕ್ಷೇಮ ಸುಭಿಕ್ಷೆ ಮಂಗಲಪ್ರಾಪ್ತಿಗಾಗಿ, ಅನಂತಬ್ರಹ್ಮಾಂಡ ನಾಯಕನಾದ, ಪರಿವಾರ ಸಮೇತನಾದ, ಭಗವಂತನಾದ ಶ್ರೀ ಸೀತಾಸಮೇತ ಶ್ರೀರಾಮನ ಪ್ರೀತಿಗಾಗಿ, ನಿರ್ಮಾಣ ಮಾಡಲಿರುವ ನೂತನ ಭವನದ ನಿರ್ವಣಕಾರ್ಯದ ಅಂಗವಾಗಿ, ಪರಿಕರಗಳಿಂದ ಸಹಿತವಾಗಿ ಶಿಲಾಪೂಜೆಯನ್ನು ಮಾಡುತ್ತೇನೆ.

ತದಂತರ್ಗತಗಣಪತಿಸ್ಮರಣಪೂರ್ವಕಂ ಭೂಮ್ಯಾದಿಪೂಜನಂ ಚ ಏಕತಂತ್ರೇಣ ಕರಿಷ್ಯೇ |

ಆ ಶಿಲೆಯಲ್ಲಿ ಅಂತರ್ಗತನಾದ ಗಣಪತಿಯ ಸ್ಮರಣೆಯೊಂದಿಗೆ ಭೂಮಿಪೂಜಾದಿಗಳನ್ನೂ ಸಹ ಕ್ರಿಯಾಕಲಾಪದೊಂದಿಗೆ ಮಾಡುತ್ತೇನೆ.

ಅಮೆರಿಕದಲ್ಲೂ ಸಂಭ್ರಮ

ಅಮೆರಿಕದ ವಾಷಿಂಗ್ಟನ್ ಸಹಿತ ಹಲವು ನಗರಗಳಲ್ಲಿ ಭಾರತೀಯರು ಸಂಭ್ರಮಾಚರಣೆ ನಡೆಸಿದರು. ವಾಷಿಂಗ್ಟನ್​ನ ಕ್ಯಾಪಿಟಲ್ ಹಿಲ್​ನಲ್ಲಿ ಜಮಾಯಿಸಿದ್ದ ಭಾರತೀಯ ಮೂಲದವರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಹಲವರು ಕೇಸರಿ ಬಟ್ಟೆಗಳನ್ನು ಧರಿಸಿದ್ದರು. ಇನ್ನು ಕೆಲವರು ಭಗವಾ ಧ್ವಜವನ್ನು ಹಿಡಿದಿದ್ದರು. ಅಮೆರಿಕದ ಎಲ್ಲ ಮಂದಿರಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಭಾರತೀಯರು ತಮ್ಮ ಮನೆಗಳಲ್ಲಿ ದೀಪ ಬೆಳಗಿ ಖುಷಿಪಟ್ಟರು.

ಶಾರದಾ ಪೀಠದ ಮೃತ್ತಿಕೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದಿಂದ ತರಲಾದ ಮೃತ್ತಿಕೆಯನ್ನೂ ಶಿಲಾನ್ಯಾಸ ಕಾರ್ಯಕ್ಕೆ ಬಳಸಲಾಗಿದೆ. ಅಂಜನ್ ಶರ್ಮಾ ಈ ಮಣ್ಣನ್ನು ಅಯೋಧ್ಯೆಗೆ ತಂದರು. ಪಿಒಕೆಗೆ ತೆರಳಲು ಭಾರತೀಯರಿಗೆ ಅನುಮತಿ ಇಲ್ಲ. ಹೀಗಾಗಿ ಹಾಂಕಾಂಗ್​ನಲ್ಲಿ ನೆಲೆಸಿರುವ ಭಾರತೀಯ ಮೂಲದ ವೆಂಕಟೇಶ ರಮಣ ಹಾಗೂ ಅವರ ಪತ್ನಿ ಶಾರದಾ ಪೀಠಕ್ಕೆ ತೆರಳಿ ಮೃತ್ತಿಕೆ ತಂದಿದ್ದಾರೆ. ಇದನ್ನು ದೆಹಲಿಯಲ್ಲಿ ಅಂಜನ್ ಶರ್ಮಾ ಅವರಿಗೆ ಹಸ್ತಾಂತರ ಮಾಡಿದರು. ವೆಂಕಟೇಶ ರಮಣ ಚೀನಾ ಪಾಸ್​ಪೋರ್ಟ್ ಹೊಂದಿರುವ ಕಾರಣ ಅಲ್ಲಿಗೆ ತೆರಳಲು ಅನುಮತಿ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net