ಪಿಎಂ ಕೇರ್ಸ್ ಸರ್ಕಾರಿ ನಿಧಿಯಲ್ಲ: ದೆಹಲಿ ಕೋರ್ಟ್​ಗೆ ಮಾಹಿತಿ ನೀಡಿಕೆ

PM Cares
Published on

ನವದೆಹಲಿ: ಕರೊನಾ ಸಾಂಕ್ರಾಮಿಕ ಆರಂಭವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಸ್ತಿತ್ವಕ್ಕೆ ತಂದಿರುವ ಪಿಎಂ ಕೇರ್ಸ್ ನಿಧಿ ಚಾರಿಟೇಬಲ್ ಟ್ರಸ್ಟ್ ಆಗಿದ್ದು, ಇದು ಭಾರತ ಸರ್ಕಾರದ ನಿಧಿಯಲ್ಲ ಎಂದು ದೆಹಲಿ ಹೈ ಕೋರ್ಟ್​ಗೆ ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

ಈ ನಿಧಿಗೆ ಮಾಹಿತಿ ಹಕ್ಕು ಕಾನೂನು (ಆರ್​ಟಿಐ) ಕೂಡ ಅನ್ವಯವಾಗದು. ಅದರ ಅಡಿಯಲ್ಲಿ ಫಂಡ್​ನ ಮಾಹಿತಿಯನ್ನು ಬಹಿರಂಗ ಪಡಿಸುವ ಅಗತ್ಯವಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ (ಪಿಎಂಒ) ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಹೇಳಿದ್ದಾರೆ. ಪಿಎಂ ಕೇರ್ಸ್ ಫಂಡ್ ಒಂದು ಚಾರಿಟೇಬಲ್ ಟ್ರಸ್ಟ್ ಆಗಿ ಸ್ಥಾಪಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾ. ಜ್ಯೋತಿ ಸಿಂಗ್ ಇದ್ದ ಪೀಠಕ್ಕೆ ತಿಳಿಸಿದ್ದಾರೆ. ಭಾರತದ ಸಂವಿಧಾನ ಅಥವಾ ಸಂಸತ್ತು ಅಥವಾ ಯಾವುದೇ ರಾಜ್ಯಗಳ ಶಾಸನ ಸಭೆಗಳ ಕಾನೂನು ಇದನ್ನು ರಚಿಸಿಲ್ಲ ಎಂದವರು ವಾದಿಸಿದ್ದಾರೆ. ಪಿಎಂ ಕೇರ್ಸ್ ನಿಧಿಯನ್ನು ಸಂವಿಧಾನದ 12ನೇ ಆರ್ಟಿಕಲ್ ಅಡಿ ‘ಸರ್ಕಾರಿ ನಿಧಿ’ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಪಿಎಂಒ ತನ್ನ ನಿಲುವನ್ನು ತಿಳಿಸಿದೆ.

ಅರ್ಜಿದಾರರ ವಾದ
ಪ್ರಧಾನಿ ಸ್ಥಾಪಿಸಿರುವ ಹಾಗೂ ಗೃಹ, ರಕ್ಷಣೆ ಮತ್ತು ವಿತ್ತ ಸಚಿವರು ಟ್ರಸ್ಟಿಗಳಾಗಿರುವ ಒಂದು ನಿಧಿಯ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವುದರಿಂದ ದೇಶದ ಜನರು ಕಳವಳಗೊಂಡಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಟ್ರಸ್ಟ್ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅದರ ನಿಧಿಯನ್ನು ಲೆಕ್ಕ ಪರಿಶೋಧಕರು ಆಡಿಟ್ ಮಾಡುತ್ತಾರೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net