ಪ್ರಧಾನಿ ಮೋದಿಗೆ ಫೋನಾಯಿಸಿದ ಅಮೆರಿಕ ಅಧ್ಯಕ್ಷರು ಕೊಟ್ಟ ಭರವಸೆಯ ಮಾತುಗಳೇನು?

Untitled
Published on

ನವದೆಹಲಿ: ಕೋವಿಶೀಲ್ಡ್​ ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಛಾ ವಸ್ತುಗಳನ್ನು ಕಳುಹಿಸಿಕೊಟ್ಟ ದಿನದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ದೂರವಾಣಿಯಲ್ಲಿ ನಿನ್ನೆ (ಏಪ್ರಿಲ್​ 26) ರಾತ್ರಿ ಮಾತುಕತೆ ನಡೆಸಿದ್ದಾರೆ.

ದೇಶದಲ್ಲಿ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ಕೋವಿಡ್​ ವಿರುದ್ಧ ಹೋರಾಡಲು ಯುರೋಪಿಯನ್​ ಒಕ್ಕೂಟ, ಜರ್ಮನಿ, ಫ್ರಾನ್ಸ್​ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡುವುದಾಗಿ ಮುಂದೆ ಬಂದ ಬೆನ್ನಲ್ಲೇ ಅಮೆರಿಕ ಸಹ ಸಂಕಷ್ಟ ಸಮಯದಲ್ಲಿ ಕೈ ಜೋಡಿಸಿದೆ.

ಬಿಡೆನ್​ ಅವರು ಫೋನ್​ ಮಾಡಿದ್ದಾಗಿ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, " ಇಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಜತೆ ದೂರವಾಣಿಯಲ್ಲಿ ಫಲಪ್ರದಾಯಕ ಸಂಭಾಷಣೆ ನಡೆಯಿತು. ಎರಡು ದೇಶಗಳಲ್ಲಿರುವ ಕೋವಿಡ್​ ಪರಿಸ್ಥಿತಿಯ ಬಗ್ಗೆ ಆಳವಾಗಿ ಚರ್ಚೆ ನಡೆಸಿದೆವು. ಅಮೆರಿಕದಿಂದ ಭಾರತಕ್ಕೆ ಅಗತ್ಯ ನೀಡುವುದಾಗಿ ಬೆಂಬಲಿಸಿದ ಅಧ್ಯಕ್ಷ ಜೋ ಬಿಡೆನ್​ ಅವರಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆಗಳ ತಯಾರಿಕೆಗೆ ಅವಶ್ಯವಿರುವ ಕಚ್ಚಾ ವಸ್ತುಗಳ ಮೂಲಗಳನ್ನು ಗುರುತಿಸಲು ಮತ್ತು ವೆಂಟಿಲೇಟರ್ ಪೂರೈಕೆಗೆ ಅಮೆರಿಕ ಸಹಾಯ ಮಾಡಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಲಸಿಕೆಗಳ ಪ್ರಯತ್ನಗಳ ಮೂಲಕ ಕೋವಿಡ್​-19ನ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತದ ನಿರಂತರ ಪ್ರಯತ್ನಕ್ಕೆ ಬೆಂಬಲವಾಗಿ ನಿರ್ಣಾಯಕ ಔಷಧಿಗಳು, ಚಿಕಿತ್ಸಕ ಮತ್ತು ಆರೋಗ್ಯ ಸಾಧನಗಳ ಪೂರೈಕೆಯನ್ನು ಖಾತರಿಪಡಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕದ ಅಧ್ಯಕ್ಷರ ಕಚೇರಿ ಶ್ವೇತಭವನವು ಟ್ವೀಟ್​ ಮೂಲಕ ಮಾಹಿತಿ ನೀಡಿದ್ದು, ಕೊರನಾ ಪ್ರಕರಣಗಳ ಇತ್ತೀಚಿನ ಉಲ್ಬಣದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಜನರಿಗೆ ಅಮೆರಿಕ ಬೆಂಬಲವಾಗಿ ನಿಲ್ಲಲಿದೆ ಎಂದು ಅಧ್ಯಕ್ಷರು ವಾಗ್ದಾನ ಮಾಡಿದರು. ಯುನೈಟೆಡ್ ಸ್ಟೇಟ್ಸ್, ಆಮ್ಲಜನಕ ಸೇರಿದಂತೆ ಹಲವಾರು ತುರ್ತು ಸಹಾಯವನ್ನು ಭಾರತಕ್ಕೆ ಒದಗಿಸುತ್ತಿದೆ ಎಂದು ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net