ವೃದ್ಧಾಪ್ಯ ಸಮೀಪಿಸುತ್ತಿದೆ ಮದುವೆ ಮಾಡಿಸಿ!; ಗ್ರಾಪಂಗೆ ಮನವಿ ಪತ್ರ

VAYASSU
Published on

ಅಕ್ಕಿಆಲೂರ (ಹಾವೇರಿ): ‘ವೃದ್ಧಾಪ್ಯ ಸಮೀಪಿಸುತ್ತಿದೆ, ನಮ್ಮ ಜಾತಿಯಲ್ಲಿ ಕನ್ಯೆ ಸಿಗುತ್ತಿಲ್ಲ, ನನಗೆ ನೀವೆ ಮದುವೆ ಮಾಡಿಸಬೇಕು’ ಎಂದು 63 ವರ್ಷದ ವೃದ್ಧರೊಬ್ಬರು ಶುಕ್ರವಾರ ನರೇಗಲ್ಲ ಗ್ರಾಪಂಗೆ ಮನವಿಪತ್ರ ಸಲ್ಲಿಸಿದ್ದಾರೆ!

ನರೇಗಲ್ಲದ ಗ್ರಾಮದೇವತೆ ಪೂಜಾರಿ ದ್ಯಾಮಣ್ಣ ಕಮ್ಮಾರ ಮನವಿ ನೀಡಿದವ. 37 ವರ್ಷದಿಂದ ಸ್ವಜಾತಿಯ ಕನ್ಯೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಇದುವರೆಗೂ ಕನ್ಯೆ ಸಿಕ್ಕಿಲ್ಲ. ಬೇಸರಗೊಂಡ ದ್ಯಾಮಣ್ಣ, ‘ನಾನು ಹಲವು ವರ್ಷಗಳಿಂದ ಒಂಟಿಯಾಗಿ ಬದುಕುತ್ತಿದ್ದೇನೆ. ದಯವಿಟ್ಟು ಬೇಗ ಕನ್ಯೆ ಹುಡುಕಿ ಮದುವೆ ಮಾಡಿಕೊಡಿ’ ಎಂದು ಗ್ರಾಪಂಗೆ ಕೋರಿದ್ದಾರೆ.

ಪ್ರತಿಕ್ರಿಯಿಸಿದ ಪಿಡಿಒ ಉಮೇಶ ಹುಕ್ಕೇರಿ, ನಮ್ಮ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ, ಮದುವೆ ಮಾಡಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net